ಕ್ರೀಡೆ

ಜ್ಯಾನಿಕ್ ಸಿನ್ನರ್ ಮಣಿಸಿ US Open ಪುರುಷರ ಸಿಂಗಲ್ಸ್ ಗೆದ್ದ ಅಲ್ಕರಾಜ್​: 6ನೇ ಗ್ರ್ಯಾಂಡ್ ಸ್ಲ್ಯಾಮ್ ಟೈಟಲ್ ಗೆಲುವು! Carlos Alcaraz

Carlos Alcaraz : ಅಮೆರಿಕದ ನ್ಯೂಯಾರ್ಕ್ ನಗರದ USTA ಬಿಲ್ಲಿ ಜೀನ್ ಕಿಂಗ್ ರಾಷ್ಟ್ರೀಯ ಟೆನಿಸ್ ಕೇಂದ್ರದಲ್ಲಿ ಭಾನುವಾರ (ಸೆ.07) ನಡೆದ ಯುಎಸ್​ ಓಪನ್​ ಪುರುಷರ ಸಿಂಗಲ್ಸ್ ಫೈನಲ್​ನಲ್ಲಿ ಯುವ ಟೆನಿಸ್​ ಆಟಗಾರ ಕಾರ್ಲೋಸ್​ ಅಲ್ಕರಾಜ್​ ವಿಜೇತರಾಗಿ ಹೊರಹೊಮ್ಮಿದ್ದಾರೆ. ​

ಸ್ಪೇನ್‌ನ 22 ವರ್ಷದ ಅಲ್ಕರಾಜ್, ಫೈನಲ್‌ನಲ್ಲಿ ವಿಶ್ವ ಪ್ರಸಿದ್ಧ ಟೆನಿಸ್​ ಆಟಗಾರ ಇಟಲಿಯ ಜ್ಯಾನಿಕ್ ಸಿನ್ನರ್ ಅವರನ್ನು ಸೋಲಿಸಿ, ಯುಎಸ್​ ಓಪನ್​ ಪುರುಷರ ಸಿಂಗಲ್ಸ್ ಟೈಟಲ್​ ಅನ್ನು ಎತ್ತಿಹಿಡಿದಿದ್ದಾರೆ. ಅಲ್ಕರಾಜ್​ ಅವರು ಸಿನ್ನರ್​ ಅವರನ್ನು 6-2, 3-6, 6-1, 6-4 ಸ್ಕೋರ್‌ನೊಂದಿಗೆ ಸೋಲಿಸಿ ತನ್ನ ಎರಡನೇ ಯುಎಸ್ ಓಪನ್ ಟೈಟಲ್​ ಅನ್ನು ಗೆದ್ದರು.

ಅಂದಹಾಗೆ, ಈ ಗೆಲುವು ಅಲ್ಕರಾಜ್‌ಗೆ ಒಟ್ಟಾರೆ ಆರನೇ ಗ್ರ್ಯಾಂಡ್ ಸ್ಲ್ಯಾಮ್ ಟೈಟಲ್ ಆಗಿದೆ. ಆರರಲ್ಲಿ ಎರಡು ಫ್ರೆಂಚ್ ಓಪನ್ (2024, 2025), ಎರಡು ವಿಂಬಲ್ಡನ್ (2023, 2024) ಮತ್ತು ಎರಡು ಯುಎಸ್ ಓಪನ್ (2022, 2025) ಸೇರಿವೆ.

ಫೈನಲ್ ಪಂದ್ಯದಲ್ಲಿ ಅಲ್ಕರಾಜ್ ತಮ್ಮ ಆಕ್ರಮಣಕಾರಿ ಆಟದ ಶೈಲಿಯನ್ನು ಪ್ರದರ್ಶಿಸಿದರು. ಮೊದಲ ಸೆಟ್‌ನಲ್ಲಿ 6-2ರಿಂದ ಗೆದ್ದ ಅವರು, ಎರಡನೇ ಸೆಟ್‌ನಲ್ಲಿ ಸಿನ್ನರ್ 6-3ರಿಂದ ಮೇಲುಗೈ ಸಾಧಿಸಿದಾಗ ಸ್ವಲ್ಪ ಒತ್ತಡಕ್ಕೆ ಸಿಲುಕಿದರು. ಆದರೆ, ಮೂರನೇ ಸೆಟ್‌ನಲ್ಲಿ 6-1ರಿಂದ ಮತ್ತು ನಾಲ್ಕನೇ ಸೆಟ್‌ನಲ್ಲಿ 6-4ರಿಂದ ಗೆಲುವು ಸಾಧಿಸಿ, ಪಂದ್ಯವನ್ನು ತಮ್ಮದಾಗಿಸಿಕೊಂಡರು. ಗಮನಾರ್ಹ ಸಂಗತಿ ಏನೆಂದರೆ, ಈ ಅದ್ಭುತ ಗೆಲುವಿನೊಂದಿಗೆ ಅಲ್ಕರಾಜ್ ಮತ್ತೆ ATP ರ‍್ಯಾಂಕಿಂಗ್‌ನಲ್ಲಿ ವಿಶ್ವ ನಂ.1 ಸ್ಥಾನಕ್ಕೆ ಏರಿದರು. ಅಲ್ಕರಾಜ್​ ಕೆರಿಯರ್‌ನಲ್ಲಿ ಐದನೇ ಬಾರಿಗೆ ನಂಬರ್​ 1 ಸ್ಥಾನಕ್ಕೇರಿದ್ದಾರೆ.

ಈ ಪಂದ್ಯವು ಅಲ್ಕರಾಜ್ ಮತ್ತು ಸಿನ್ನರ್ ನಡುವಿನ ರೋಚಕ ಫೈನಲ್ ಆಗಿತ್ತು. ಏಕೆಂದರೆ, ಇಬ್ಬರೂ ಆಟಗಾರರು ಈ ವರ್ಷದ ಗ್ರ್ಯಾಂಡ್ ಸ್ಲ್ಯಾಮ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಸಿನ್ನರ್ ಅವರು 2025ರ ಆಸ್ಟ್ರೇಲಿಯನ್ ಓಪನ್ ಮತ್ತು ಚೈನಾ ಓಪನ್ ಗೆದ್ದಿದ್ದರು. ಇತ್ತ ಅಲ್ಕರಾಜ್ ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್ ಗೆದ್ದು ಒಳ್ಳೆಯ ಫಾರ್ಮ್‌ನಲ್ಲಿದ್ದರು. ಹೀಗಾಗಿ ಇಬ್ಬರ ಪೈಪೋಟಿ ತೀವ್ರ ಕುತೂಹಲವನ್ನು ಮೂಡಿಸಿತ್ತು. ಅಂತಿಮವಾಗಿ ಈ ಸ್ಪರ್ಧೆಯಲ್ಲಿ ಅಲ್ಕರಾಜ್​ ಜಯಗಳಿಸಿದರು.

ಇನ್ನು ಅಲ್ಕರಾಜ್‌ ಅವರ ಈ ಗೆಲುವು ಅವರನ್ನು ಗ್ರ್ಯಾಂಡ್ ಸ್ಲ್ಯಾಮ್ ಇತಿಹಾಸದಲ್ಲಿ 21ನೇ ವಯಸ್ಸಿನೊಳಗೆ ಆರು ಟೈಟಲ್‌ಗಳನ್ನು ಗೆದ್ದ ವಿಶೇಷ ಆಟಗಾರರ ಪಟ್ಟಿಯಲ್ಲಿ ಸೇರಿಸಿದೆ. ಈ ಅದ್ಭುತ ಗೆಲುವು ರಾಫೆಲ್ ನಡಾಲ್‌ನಂತಹ ದಿಗ್ಗಜರೊಂದಿಗೆ ಅಲ್ಕರಾಜ್​ರನ್ನು ಹೋಲಿಸುವಂತೆ ಮಾಡಿದೆ. (ಏಜೆನ್ಸೀಸ್​)