ಲಂಡನ್: ಸತತ 4 ಬಾರಿಯ ಚಾಂಪಿಯನ್ ನೊವಾಕ್ ಜೋಕೊವಿಕ್ ಪ್ರಾಬಲ್ಯ ಕೊನೆಗೊಳಿಸಿದ ವಿಶ್ವ ನಂ.1 ಆಟಗಾರ ಕಾಲೋರ್ಸ್ ಅಲ್ಕರಾಜ್ ಮೊಟ್ಟಮೊದಲ ಬಾರಿಗೆ ವಿಂಬಲ್ಡನ್ ಪ್ರಶಸ್ತಿಗೆ ಮುತ್ತಿಕ್ಕಿ ಬೀಗಿದರು. 5 ಸೆಟ್ಗಳ ಮ್ಯಾರಥಾನ್ ಹೋರಾಟದಲ್ಲಿ ರೋಚಕ ಗೆಲುವು ದಾಖಲಿಸಿದ ಸ್ಪೇನ್ ತಾರೆ ಅಲ್ಕರಾಜ್ 2ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆಲುವಿನ ಸಂಭ್ರಮ ಕಂಡರೆ, ವಿಶ್ವ ನಂ.2 ನೊವಾಕ್ ಜೊಕೊವಿಕ್ ಅವರ 24ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆಲುವಿನ ಕನಸು ಭಗ್ನಗೊಂಡಿತು.
ಆಲ್ ಇಂಗ್ಲೆಂಡ್ ಕ್ಲಬ್ನ ಸೆಂಟರ್ ಕೋರ್ಟ್ನಲ್ಲಿ ಭಾನುವಾರ ನಡೆದ ಜಿದ್ದಾಜಿದ್ದಿನ ಫೈನಲ್ ಹೋರಾಟದಲ್ಲಿ 20 ವರ್ಷದ ಕಾಲೋರ್ಸ್ ಅಲ್ಕರಾಜ್ 1-6, 7-6 (8-6), 6-1, 3-6, 6-4ರಿಂದ ಸೆರ್ಬಿಯಾದ ಅನುಭವಿ ಆಟಗಾರ ಜೋಕೊವಿಕ್ ಎದುರು ಗೆಲುವು ದಾಖಲಿಸಿದರು. ವರ್ಷದ ಮೊದಲ 2 ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆದ್ದಿದ್ದ 36 ವರ್ಷದ ಜೋಕೊವಿಕ್ ಅವರ ಹ್ಯಾಟ್ರಿಕ್ ಸಾಧನೆಗೆ ಅಲ್ಕರಾಜ್ ಅಡ್ಡಿಯಾದರು. ಈ ಮೂಲಕ ಕಳೆದ ಫ್ರೆಂಚ್ ಓಪನ್ ಟೂರ್ನಿಯ ಸೆಮಿಫೈನಲ್ ಸೋಲಿನ ಸೇಡು ತೀರಿಸಿಕೊಂಡರು.
ಅಲ್ಕರಾಜ್ 4 ಗಂಟೆ 42 ನಿಮಿಷಗಳ ಹೋರಾಟದಲ್ಲಿ ಗೆದ್ದು ವಿಶ್ವ ನಂ. 1 ಪಟ್ಟವನ್ನೂ ಉಳಿಸಿಕೊಂಡರು. ಅಲ್ಲದೆ 2003ರ ಬಳಿಕ ಫೆಡರರ್, ರಾಫೆಲ್ ನಡಾಲ್, ಆಂಡಿ ಮರ್ರೆ ಮತ್ತು ಜೋಕೊವಿಕ್ ಹೊರತಾಗಿ ವಿಂಬಲ್ಡನ್ ಪ್ರಶಸ್ತಿ ಗೆದ್ದ ಮೊದಲ ಸಾಧಕ ಎನಿಸಿದರು.