ನವದೆಹಲಿ: 1983ರಲ್ಲಿ ಭಾರತ ಕ್ರಿಕೆಟ್ ತಂಡ ಸಾಧಿಸಿದ ಐತಿಹಾಸಿಕ ವರ್ಲ್ಡ್ ಕಪ್ ಗೆಲುವಿನ ಸುತ್ತ ಹೆಣೆದಿರುವ ಚಿತ್ರ '83'. ಕಬೀರ್ ಖಾನ್ ನಿರ್ದೇಶನದ ಈ ಐಕಾನಿಕ್ ಸಿನಿಮಾದಲ್ಲಿ ನಟ ರಣವೀರ್ ಸಿಂಗ್ ಭಾರತದ ಕ್ಯಾಪ್ಟನ್ ಕಪಿಲ್ ದೇವ್ ಅವರ ಪಾತ್ರ ನಿರ್ವಹಿಸಿದ್ದು, ತಾಹಿರ್ ಭಾಸಿನ್ ಸುನೀಲ್ ಗವಾಸ್ಕರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಡಿಸೆಂಬರ್ 24 ರಂದು ಕನ್ನಡ ಮತ್ತು ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆ ಹೊಂದಲಿರುವ ಈ ಸಿನಿಮಾದ ಟ್ರೇಲರ್ ಇನ್ನೆರಡು ದಿನಗಳಲ್ಲಿ ಅಂದರೆ ನ.30 ರಂದು ಹೊರಬೀಳಲಿದೆ ಎಂದು ರಣವೀರ್ ಸಿಂಗ್ ಇಂದು ತಿಳಿಸಿದ್ದಾರೆ. ಚಿತ್ರದ ಹೊಸತೊಂದು ಆಕರ್ಷಕ ಪೋಸ್ಟರ್ಅನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿರುವ ಸಿಂಗ್, ಅದರೊಂದಿಗೆ ಕಪಿಲ್ ದೇವ್ 1983 ರಲ್ಲಿ ಹೇಳಿದ್ದ ಮಾತೊಂದನ್ನು ಹಂಚಿಕೊಂಡಿದ್ದಾರೆ.
ಈ ಪೋಸ್ಟರ್ನಲ್ಲಿ ಕಪಿಲ್ ದೇವ್ ಪಾತ್ರಧಾರಿ ರಣವೀರ್, ಇತರ ತಂಡದ ಸದಸ್ಯರೊಂದಿಗೆ ಕ್ರಿಕೆಟ್ ಜೆರ್ಸಿ ತೊಟ್ಟು ನಗುತ್ತಾ ಹೆಜ್ಜೆ ಹಾಕುತ್ತಿರುವುದನ್ನು ಕಾಣಬಹುದು. ನಿನ್ನೆಯಷ್ಟೇ ವರ್ಲ್ಡ್ ಕಪ್ ಫೈನಲ್ನಲ್ಲಿ ಪಂದ್ಯಕ್ಕೆ ಮಹತ್ವದ ತಿರುವು ನೀಡಿದ್ದ ಕಪಿಲ್ ಕ್ಯಾಚ್ನ ದೃಶ್ಯವನ್ನು ತೋರಿಸುವ ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. ಚಿತ್ರದ ಟ್ರೇಲರ್ ಮತ್ತು ಖುದ್ದು ಚಿತ್ರದ ಬಿಡುಗಡೆಗೆ ಸಿನಿಪ್ರಿಯರು ಹಾಗೂ ಕ್ರಿಕೆಟ್ ಪ್ರೇಮಿಗಳು ಉತ್ಸಾಹದಿಂದ ಕಾದಿದ್ದಾರೆ.
ಚಿತ್ರದಲ್ಲಿ ನಟ ಪಂಕಜ್ ತ್ರಿಪಾಠಿ ಟೀಂ ಮ್ಯಾನೇಜರ್ ಆಗಿದ್ದ ಪಿ.ಆರ್.ಮಾನ್ ಸಿಂಗ್ ಪಾತ್ರದಲ್ಲಿ, ಸಾಖಿಬ್ ಸಲೀಂ ಮೊಹಿಂದರ್ ಅಮರ್ನಾಥ್ ಪಾತ್ರದಲ್ಲಿ, ಸಾಹಿಲ್ ಖತ್ತರ್ ಸೈಯೆದ್ ಕಿರ್ಮಾನಿ ಪಾತ್ರದಲ್ಲಿ ಮತ್ತು ಅಮ್ಮಿ ವಿರ್ಕ್ ಬಲ್ವಿಂದರ್ ಸಿಂಗ್ ಸಂಧು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಣವೀರ್ ಪತ್ನಿ ನಟಿ ದೀಪಿಕಾ ಪಡುಕೋಣೆಯೇ ತೆರೆಯ ಮೇಲೆ ಕಪಿಲ್ ದೇವ್ ಪತ್ನಿ ರೋಮಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್)