ಕೇಪ್ಟೌನ್: ಸೆಂಚುರಿಯನ್ನಲ್ಲಿ ಅನುಭವಿಸಿದ ಸೋಲಿನ ಸಹಿತ 2023ರಲ್ಲಿ ಎದುರಿಸಿದ ಕಹಿಗಳನ್ನೆಲ್ಲ ಮರೆತು, 2024ರಲ್ಲಿ ಶುಭಾರಂಭ ಕಾಣಲು ಟೀಮ್ ಇಂಡಿಯಾ ಸಜ್ಜಾಗಿದೆ. ಆತಿಥೇಯ ದ. ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ 2ನೇ ಹಾಗೂ ಅಂತಿಮ ಪಂದ್ಯ ಬೆಟ್ಟದ ಮೇಲಿನ ರಮಣೀಯ ತಾಣವೆನಿಸಿರುವ ನ್ಯೂಲ್ಯಾಂಡ್ಸ್ ಅಂಗಣದಲ್ಲಿ ಬುಧವಾರ ಆರಂಭಗೊಳ್ಳಲಿದ್ದು, ರೋಹಿತ್ ಶರ್ಮ ಗೆಲುವಿನೊಂದಿಗೆ ಸರಣಿ ಸಮಬಲ ಸಾಧಿಸುವ ತವಕದಲ್ಲಿದೆ. ಈ ಬಾರಿ ಹರಿಣಗಳ ವೇಗದ ಪಡೆಗೆ ಸೆಡ್ಡುಹೊಡೆಯಬೇಕಾದ ಸವಾಲು ಭಾರತ ತಂಡದ ಮುಂದಿದ್ದು, ಹೊಸ ವರ್ಷವನ್ನು ಹೊಸ ಹುರುಪಿನೊಂದಿಗೆ ಆರಂಭಿಸಬೇಕಾಗಿದೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಬ್ಯಾಟಿಂಗ್-ಬೌಲಿಂಗ್ ಎರಡೂ ವಿಭಾಗಗಳಲ್ಲಿ ವೈಫಲ್ಯ ಅನುಭವಿಸಿತ್ತು. ಮೊದಲ ಇನಿಂಗ್ಸ್ನಲ್ಲಿ ಕೆಎಲ್ ರಾಹುಲ್ ಮತ್ತು 2ನೇ ಇನಿಂಗ್ಸ್ನಲ್ಲಿ ವಿರಾಟ್ ಕೊಹ್ಲಿ ಏಕಾಂಗಿ ಹೋರಾಟ ತೋರಿದ್ದರೆ, ಬೌಲಿಂಗ್ನಲ್ಲಿ ಜಸ್ಪ್ರೀತ್ ಬುಮ್ರಾಗೆ ಇತರ ಬೌಲರ್ಗಳಿಂದ ಸಮರ್ಥ ಬೆಂಬಲ ಸಿಗದೆ ಹಿನ್ನಡೆಯಾಗಿತ್ತು. ಕೇಪ್ಟೌನ್ನಲ್ಲಿ ಇದುವರೆಗೆ ಆಡಿರುವ 6 ಟೆಸ್ಟ್ಗಳಲ್ಲಿ ಒಂದೂ ಗೆಲುವು ಕಾಣದಿರುವ ಭಾರತ ತಂಡ ಈ ಬಾರಿ ಹೊಸ ಇತಿಹಾಸ ರಚಿಸಬೇಕಾದ ಸವಾಲು ಹೊಂದಿದೆ.
ಅಗ್ರ ಕ್ರಮಾಂಕದ ಯುವ ಬ್ಯಾಟರ್ಗಳಾದ ಯಶಸ್ವಿ ಜೈಸ್ವಾಲ್, ಶುಭಮಾನ್ ಗಿಲ್ ಜತೆಗೆ ಶ್ರೇಯಸ್ ಅಯ್ಯರ್ ಮತ್ತು ನಾಯಕ ರೋಹಿತ್ ಶರ್ಮ ಕೂಡ ಹರಿಣಗಳ ವೇಗದ ಬೌಲಿಂಗ್ ವಿಭಾಗದ ಎದುರು ತತ್ತರಿಸಿದ್ದಾರೆ. ನ್ಯೂಲ್ಯಾಂಡ್ಸ್ನಲ್ಲಾದರೂ ಭಾರತದ ಬ್ಯಾಟಿಂಗ್ ವಿಭಾಗ ಹರಿಣಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಲ್ಲಬೇಕಿದೆ. ರಬಾಡ ಜತೆಗೆ ನಾಂಡ್ರೆ ರ್ಬಗರ್, ಜಾನ್ಸೆನ್ ದಾಳಿಗೂ ಭಾರತ ಸೆಡ್ಡುಹೊಡೆಯಬೇಕಿದೆ.
ವೇಗದ ಬೌಲಿಂಗ್ಗೆ ಸತ್ವಪರೀಕ್ಷೆ
ತವರಿನ ಏಕದಿನ ವಿಶ್ವಕಪ್ ವೇಳೆ ಭಾರತದ ಬೌಲಿಂಗ್ ವಿಭಾಗ ಅತ್ಯಂತ ಬಲಿಷ್ಠವಾಗಿ ಕಂಡಿತ್ತು. ಆದರೆ ಇದೀಗ ಮೊಹಮದ್ ಶಮಿ ಅವರೊಬ್ಬರ ಗೈರಿನಲ್ಲಿ ದಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಭಾರತದ ಬೌಲಿಂಗ್ ವಿಭಾಗ ಸತ್ವರಹಿತವಾಗಿ ಕಾಣಿಸಿತ್ತು. ಬುಮ್ರಾ ಬೆಂಬಲ ಸಿಗದೆ ಪರದಾಡಿದರೆ, ಸಿರಾಜ್ ಪರಿಣಾಮಕಾರಿ ಎನಿಸಲಿಲ್ಲ. ಇನ್ನು ಪ್ರಸಿದ್ಧಕೃಷ್ಣ, ಶಾರ್ದೂಲ್ ಬೌಲಿಂಗ್ ನೀರಸವಾಗಿತ್ತು. ಹೀಗಾಗಿ ಭಾರತ ಈ ಬಾರಿ ವೇಗದ ಬೌಲಿಂಗ್ ವಿಭಾಗದಲ್ಲಿ ಮುಕೇಶ್ ಕುಮಾರ್ ಮತ್ತು ಆವೇಶ್ ಖಾನ್ ಕಣಕ್ಕಿಳಿಸುವ ಚಿಂತನೆಯಲ್ಲಿದೆ.
ಪಿಚ್ ರಿಪೋರ್ಟ್
ನ್ಯೂಲ್ಯಾಂಡ್ಸ್ ಪಿಚ್ ಹಸಿರಾಗಿದ್ದು, ವೇಗಿಗಳಿಗೆ ಆರಂಭದಲ್ಲೇ ನೆರವು ನೀಡಲಿರುವುದರಿಂದ ಟಾಸ್ ನಿರ್ಣಾಯಕ ಪಾತ್ರ ವಹಿಸಲಿದೆ. ಪಿಚ್ ಬ್ಯಾಟಿಂಗ್ಗೂ ನೆರವು ನೀಡುವ ನಿರೀೆ ಇದ್ದು, ಸ್ಪಿನ್ನರ್ಗಳಿಗೂ ಸ್ವಲ್ಪಮಟ್ಟಿನ ನೆರವು ಲಭಿಸಬಹುದು. ಹೀಗಾಗಿ ಆರ್. ಅಶ್ವಿನ್ರನ್ನು 2ನೇ ಸ್ಪಿನ್ನರ್ ಆಗಿ ತಂಡದಲ್ಲಿ ಉಳಿಸಿಕೊಳ್ಳಲು ಭಾರತ ಚಿಂತನೆ ನಡೆಸಿದೆ. ಸೆಂಚುರಿಯನ್ನಂತೆ ಇಲ್ಲಿ ಮಳೆ ಭೀತಿ ಇರುವುದಿಲ್ಲ.
ಟೀಮ್ ನ್ಯೂಸ್:
ಭಾರತ: ಬೆನ್ನುನೋವಿನಿಂದಾಗಿ ಮೊದಲ ಟೆಸ್ಟ್ ತಪ್ಪಿಸಿಕೊಂಡಿದ್ದ ಆಲ್ರೌಂಡರ್ ರವೀಂದ್ರ ಜಡೇಜಾ 2ನೇ ಟೆಸ್ಟ್ಗೆ ಮರಳುವುದು ಖಚಿತವೆನಿಸಿದೆ. ಅವರಿಗೆ ಆರ್. ಅಶ್ವಿನ್ ಅಥವಾ ವೇಗಿ ಶಾರ್ದೂಲ್ ಠಾಕೂರ್ ಸ್ಥಾನ ಬಿಟ್ಟುಕೊಡುವ ನಿರೀಕ್ಷೆ ಇದೆ. ಇನ್ನು ಪದಾರ್ಪಣೆ ಟೆಸ್ಟ್ನಲ್ಲಿ ನಿರಾಸೆ ಮೂಡಿಸಿದ ಕನ್ನಡಿಗ ಪ್ರಸಿದ್ಧ ಕೃಷ್ಣ ಬದಲಿಗೆ ಚೆಂಡನ್ನು ಎರಡೂ ಕಡೆ ಸ್ವಿಂಗ್ ಮಾಡಬಲ್ಲ ಮುಕೇಶ್ ಕುಮಾರ್ ಆಡುವುದು ಬಹುತೇಕ ಖಚಿತವೆನಿಸಿದೆ.
ದ. ಆಫ್ರಿಕಾ: ಗಾಯಾಳು ವೇಗಿ ಗೆರಾಲ್ಡ್ ಕೋಟ್ಜೀ 2ನೇ ಟೆಸ್ಟ್ನಿಂದ ಹೊರಗುಳಿಯಲಿದ್ದು, ಫಿಟ್ನೆಸ್ ಸಮಸ್ಯೆಯಿಂದ ಮೊದಲ ಟೆಸ್ಟ್ ತಪ್ಪಿಸಿಕೊಂಡಿದ್ದ ವೇಗಿ ಲುಂಗಿ ಎನ್ಗಿಡಿ ಮರಳಬಹುದು. ಎನ್ಗಿಡಿ ಫಿಟ್ ಆಗದಿದ್ದರೆ ಸ್ಪಿನ್ನರ್ ಕೇಶವ್ ಮಹಾರಾಜ್, ಕೋಟ್ಜೀ ಸ್ಥಾನವನ್ನು ತುಂಬಬಹುದು. ಟೆಂಬಾ ಬವುಮಾ ಸ್ಥಾನದಲ್ಲಿ ಜುಬೇರ್ ಹಂಜಾ ಆಡಲಿದ್ದಾರೆ. 28 ವರ್ಷದ ಹಂಜಾ ಇದುವರೆಗೆ 6 ಟೆಸ್ಟ್ ಆಡಿದ್ದು, 62 ರನ್ ಗರಿಷ್ಠ ಗಳಿಕೆಯಾಗಿದೆ.
ಆರಂಭ: ಮಧ್ಯಾಹ್ನ 1.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
*ಕೇಪ್ಟೌನ್ನಲ್ಲಿ ಮುಖಾಮುಖಿ: 6
ಭಾರತ: 0
ದ. ಆಫ್ರಿಕಾ: 4
ಡ್ರಾ: 2
*ಕೇಪ್ಟೌನ್ನಲ್ಲಿ ದ. ಆಫ್ರಿಕಾ: 59
ಗೆಲುವು: 27
ಸೋಲು: 21
ಡ್ರಾ: 11