ನವದೆಹಲಿ: ಟಿ20 ವಿಶ್ವಕಪ್ ಮುಕ್ತಾಯದ ಬಳಿಕ ನೂತನ ಕೋಚ್ ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಭಾರತ ತಂಡಕ್ಕೆ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಸಿಹಿ-ಕಹಿ ಸಮಾನಾಗಿ ಲಭಿಸಿದೆ. ಟಿ20 ಸರಣಿಯಲ್ಲಿ ಆತಿಥೇಯರ ವಿರುದ್ಧ ಗೆದ್ದು ಬೀಗಿದ್ದ ಪ್ರವಾಸಿ ತಂಡವು ಏಕದಿನ ಸೀರೀಸ್ನಲ್ಲಿ ಸೋಲುವ ಮೂಲಕ ಭಾರೀ ಮುಖಭಂಗವನ್ನು ಅನುಭವಿಸಿತ್ತು. ಇದೀಗ ಬಾಂಗ್ಲಾದೇಶ ವಿರುದ್ಧ ಸರಣಿಗೆ ಭಾರತ ತಂಡ ಸಜ್ಜಾಗುತ್ತಿದ್ದು, ಸ್ಟ್ರಾಂಗ್ ಕಮ್ಬ್ಯಾಕ್ ಮಾಡಲು ಕಠಿಣ ಅಭ್ಯಾಸದಲ್ಲಿ ತೊಡಗಿದೆ.
ಈ ಕುರಿತು ಮಾತನಾಡಿರುವ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಬಾಂಗ್ಲಾದೇಶವನ್ನು ಹಗುರವಾಗಿ ಪರಿಗಣಿಸಬೇಡಿ ಎಂದು ಟೀಮ್ ಇಂಡಿಯಾಗೆ ಸಲಹೆ ನೀಡಿದ್ದಾರೆ. ಲೆಜೆಂಡ್ಸ್ ಲೀಗ್ ಕ್ರಿಕೆಟ್ನಲ್ಲಿ ಭಾಗಿಯಾಗಲು ದೆಹಲಿಗೆ ಬಂದಿದ್ದ ವೇಳೆ ಮಾತನಾಡಿದ ಸುರೇಶ್ ರೈನಾ ಹಲವು ವಿಚಾರಗಳಕ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ಭಾರತ ತಂಡವು ಮುಂದಿನ ಕೆಲವೇ ದಿನಗಳಲ್ಲಿ ಬಾಂಗ್ಲಾದೇಶ ವಿರುದ್ಧ ಸರಣಿ ಆಡಲಿದೆ. ಬಾಂಗ್ಲಾದೇಶ ತಂಡವು ಉತ್ತಮ ಸ್ಪಿನ್ ವಿಭಾಗ ಹೊಂದಿರುವುದರಿಂದ ಮತ್ತು ಆಡುತ್ತಿರುವ ರೀತಿ ನೋಡಿದರೆ ಲಘುವಾಗಿ ಪರಿಗಣಿಸಲಾಗುವುದಿಲ್ಲ. ಈ ಸರಣಿಯೂ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗಾವಸ್ಕರ್ ಟ್ರೋಫಿಗೆ ಇದು ಪ್ರಾಕ್ಟೀಸ್ ಮ್ಯಾಚ್ ಆಗಲಿದ್ದು, ಭಾರತ ತಂಡವು ಬಾಂಗ್ಲಾದೇಶವನ್ನು ಲಘುವಾಗಿ ಪರಿಗಣಿಸಬಾರದೆಂದು ಎಂದು ಟೀಮ್ ಇಂಡಿಯಾಗೆ ಸಲಹೆ ನೀಡಿದ್ದಾರೆ.
ಪಾಕಿಸ್ತಾನ ಪ್ರವಾಸದಲ್ಲಿರುವ ಬಾಂಗ್ಲಾದೇಶ ಕ್ರಿಕೆಟ್ ತಂಡವು ಇತ್ತೀಚಿಗೆ ಮುಕ್ತಾಯಗೊಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯರನ್ನು ಸೋಲಿಸಿ ಶಾಕ್ ಕೊಡುವ ಮೂಲಕ ಸುದ್ದಿಯಾಗಿದ್ದರು. ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಲ್ರೌಂಡ್ ಪ್ರದರ್ಶನದ ಮೂಲಕ ಭರ್ಜರಿ ಪ್ರದರ್ಶನ ನೀಡಿದ್ದ ಬಾಂಗ್ಲಾದೇಶ ತಂಡವು ಸರಣಿಯನ್ನು ವಶಪಡಿಸಿಕೊಳ್ಳುವ ಹಂಬಲದಲ್ಲಿ ತಯಾರಿ ನಡೆಸುತ್ತಿದೆ.