ಕ್ರೀಡೆ

ಸೆಕ್ಯೂರಿಟಿ ಕೊಡಲು ನಾವ್ಯಾರು? ಶಕೀಬ್​ಗೆ ಭದ್ರತೆ ಒದಗಿಸುವ ಕೆಲಸ ನಮ್ಮದಲ್ಲ: ಬಾಂಗ್ಲಾ ಕ್ರಿಕೆಟ್​ ಬೋರ್ಡ್​

ಢಾಕಾ: ರಾಜಕೀಯ ಅಶಾಂತಿಯ ವೇಳೆ ನಡೆದ ಹತ್ಯೆಯಲ್ಲಿ ಬಾಂಗ್ಲಾದೇಶ (Bangladesh) ಕ್ರಿಕೆಟ್​ನ ಸ್ಟಾರ್​ ಆಟಗಾರ ಶಕೀಬ್ ಅಲ್​ ಹಸನ್​ (Shakib Al Hasan) ವಿರುದ್ಧ ಕೊಲೆ ಆರೋಪ ಕೇಳಿಬಂದಿದ್ದು, ಈ ಕೃತ್ಯದಲ್ಲಿ ಶಕೀಬ್​ ಕೈವಾಡವಿದೆ ಎಂದು ಹೇಳಲಾಗಿದೆ. ಸದ್ಯ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದು, ಹಸನ್​ಗೆ ಬಿಗಿ ಭದ್ರತೆಯ ಅವಶ್ಯಕತೆ ಹೆಚ್ಚಾಗಿದೆ. ನಿವೃತ್ತಿಯ ಹೊಸ್ತಿಲಲ್ಲಿರುವ ಶಕೀಬ್​ ತಮ್ಮ ಕಡೆಯ ಪಂದ್ಯವನ್ನು ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಆಡಲು ಬಯಸಿದ್ದಾರೆ. ಇದಕ್ಕಾಗಿ ಬಾಂಗ್ಲಾದೇಶ ಕ್ರಿಕೆಟ್​ ಮಂಡಳಿಯನ್ನು ಭದ್ರತೆ ಒದಗಿಸುವಂತೆ ಮನವಿ ಮಾಡಿದ್ದರು. ಆದ್ರೆ, ಈ ವಿಷಯದಲ್ಲಿ ಇದೀಗ ಬಿಸಿಬಿ ಉಲ್ಟಾ ಹೊಡೆದಿರುವುದು ಸದ್ಯ ಭಾರೀ ಆಶ್ಚರ್ಯಕ್ಕೆ ಕಾರಣವಾಗಿದೆ.

ನಿವೃತ್ತಿ ಹೊಂದಲು ಶಕೀಬ್​ ಸಜ್ಜು

"ಶಕೀಬ್​ ತಮ್ಮ ಅಭಿಮಾನಿಗಳ ಎದುರು ತವರಿನಲ್ಲಿ ಎಲ್ಲಾ ಕ್ರಿಕೆಟ್ ಫಾರ್ಮೆಟ್​ಗಳಿಂದ ನಿವೃತ್ತಿ ಹೊಂದಲು ಬಯಸಿದ್ದಾರೆ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಅವರಿಗೆ ಸೆಕ್ಯೂರಿಟಿ ಅವಶ್ಯಕತೆ ಹೆಚ್ಚಿದೆ. ಇದರ ಬಗ್ಗೆ ಶಕೀಬ್ ಕೂಡ ಪ್ರಸ್ತಾಪ ಮಾಡಿದ್ದಾರೆ. ಆದ್ರೆ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಒಬ್ಬ ಸ್ಟಾರ್ ಆಟಗಾರನಿಗೆ ಹೇಗೆ ಭದ್ರತೆ ಖಾತರಿಪಡಿಸಲು ಸಾಧ್ಯ? ಈ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ವಹಿಸಿಕೊಳ್ಳಬೇಕು. ಅದಕ್ಕೆ ಹಸನ್​ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು. ಸೆಕ್ಯೂರಿಟಿ ಕೊಡಲು ನಾವ್ಯಾರು" ಎಂದು ಬಿಸಿಬಿ ಮುಖ್ಯಸ್ಥ ಫಾರುಕ್ ಅಹ್ಮದ್ ಹೇಳಿದ್ದಾರೆ.

ಸೆಕ್ಯೂರಿಟಿ ಕೊಡಲು ಸಾಧ್ಯವಿಲ್ಲ

''ಶಕೀಬ್​ಗೆ ಭದ್ರತೆ ಒದಗಿಸುವ ಕೆಲಸ ನಮ್ಮ ಕೈಯಲ್ಲಿಲ್ಲ. ಸೆಕ್ಯೂರಿಟಿ ನಿಯೋಜಿಸುವ ಬಗ್ಗೆ ಸರ್ಕಾರವೇ ತೀರ್ಮಾನಿಸಬೇಕು. ಸದ್ಯದ ಪರಿಸ್ಥಿತಿಯಲ್ಲಿ ನಾವು ಏನನ್ನೂ ಮಾಡಲು ಸಾಧ್ಯವಿಲ್ಲ ಮತ್ತು ಒಬ್ಬ ವ್ಯಕ್ತಿಗೆ ಭದ್ರತಾ ರಕ್ಷಣೆ ನೀಡುವ ಸಾಮರ್ಥ್ಯ ನಮಗಿಲ್ಲ. ನಾನು ಯಾವುದೇ ಸರ್ಕಾರದ ಭದ್ರತಾ ಏಜೆನ್ಸಿಯಲ್ಲ. ಸೆಕ್ಯೂರಿಟಿ ಸಮಸ್ಯೆಗಳನ್ನು ಬಾಂಗ್ಲಾದೇಶ ಸರ್ಕಾರ ತೆರವುಗೊಳಿಸಿದೆ. ಹೀಗಾಗಿ ನಾವು ಏನನ್ನೂ ಹೇಳಲು ಆಗುವುದಿಲ್ಲ" ಎಂದು ಫಾರುಕ್ ಅಹ್ಮದ್ ಸ್ಪಷ್ಟಪಡಿಸಿದ್ದಾರೆ. ಇದೀಗ ಶಕೀಬ್ ಅಲ್ ಹಸನ್ ಮುಂದಿನ ನಿಲುವೇನು? ಕಡೆಯ ಪಂದ್ಯ ಆಡಲಿದ್ದಾರಾ ಅಥವಾ ಇಲ್ಲಿಗೆ ಕೈಬಿಡಲಿದ್ದಾರಾ? ಎಂಬುದೇ ಸದ್ಯ ಕ್ರಿಕೆಟ್ ಅಭಿಮಾನಿಗಳ ಗೊಂದಲ,(ಏಜೆನ್ಸೀಸ್).