ಕ್ರೀಡೆ

ಹಾಲಿ ವಿಶ್ವ ಚೆಸ್​ ಚಾಂಪಿಯನ್​ಗೆ ಸವಾಲೊಡ್ಡುವ ಅವಕಾಶದ ಸನಿಹದಲ್ಲಿ ಭಾರತದ ಯುವತಾರೆ ಗುಕೇಶ್​

ಟೊರಾಂಟೊ: ಭಾರತದ ಯುವ ಗ್ರಾಂಡ್​ ಮಾಸ್ಟರ್​ ದೊಮ್ಮರಾಜು ಗುಕೇಶ್​ ಹಾಲಿ ವಿಶ್ವ ಚೆಸ್​ ಚಾಂಪಿಯನ್​ಗೆ ಸವಾಲೊಡ್ಡುವ ಅವಕಾಶದ ಐತಿಹಾಸಿಕ ಸಾಧನೆಯ ಸನಿಹಕ್ಕೇರಿದ್ದಾರೆ. ಕ್ಯಾಂಡಿಡೇಟ್ಸ್​ ಚೆಸ್​ ಟೂರ್ನಿಯ 13ನೇ ಸುತ್ತಿನಲ್ಲಿ ಫ್ರಾನ್ಸ್​​​ನ ಫಿರೌಜಾ ಅಲಿರೆಜಾ ವಿರುದ್ಧ ಅಮೋ ಗೆಲುವು ದಾಖಲಿಸಿದ 17 ವರ್ಷದ ಡಿ. ಗುಕೇಶ್​ ಅಂಕಪಟ್ಟಿಯಲ್ಲಿ ಏಕಾಂಗಿಯಾಗಿ ಅಗ್ರಸ್ಥಾನ ಅಲಂಕರಿಸಿದ್ದಾರೆ. ಈ ಮೂಲಕ ವಿಶ್ವ ಚಾಂಪಿಯನ್​ ಪಟ್ಟದ ಅಭ್ಯರ್ಥಿಯಾಗುವ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆ ಸಂಪಾದಿಸುವತ್ತ ಮುನ್ನಡೆದಿದ್ದಾರೆ.

ಚೆನ್ನೆ$ನ ಗುಕೇಶ್​ 14ನೇ ಹಾಗೂ ಕೊನೇ ಸುತ್ತಿನಲ್ಲೂ ಗೆಲುವು ದಾಖಲಿಸಿದರೆ, ಕ್ಯಾಂಡಿಡೇಟ್ಸ್​ ಟೂರ್ನಿಯ ಪ್ರಶಸ್ತಿ ಗೆಲುವಿನೊಂದಿಗೆ ವರ್ಷಾಂತ್ಯದಲ್ಲಿ ಹಾಲಿ ವಿಶ್ವ ಚಾಂಪಿಯನ್​ ಚೀನಾದ ಡಿಂಗ್​ ಲಿರೆನ್​ಗೆ ಸವಾಲೊಡ್ಡುವ ಅವಕಾಶ ಪಡೆಯಲಿದ್ದಾರೆ. ಗುಕೇಶ್​ಗೆ ಹಿಕಾರು ನಕಮುರಾ ಕೊನೇ ಎದುರಾಳಿಯಾಗಿದ್ದಾರೆ.

ಗುಕೇಶ್​ 8.5 ಅಂಕ ಹೊಂದಿದ್ದರೆ, ರಷ್ಯಾದ ಇಯಾನ್​ ನೆಪೊಮ್ನಿಯಾಚಿ, ಅಮೆರಿಕದ ಹಿಕಾರು ನಕಮುರಾ ಮತ್ತು ಫ್ಯಾಬಿಯಾನೊ ಕರುವಾನ ತಲಾ 8 ಅಂಕಗಳೊಂದಿಗೆ ಜಂಟಿ 2ನೇ ಸ್ಥಾನದಲ್ಲಿದ್ದಾರೆ. ಸದ್ಯ ಈ ನಾಲ್ವರು ಪ್ರಶಸ್ತಿ ರೇಸ್​ನಲ್ಲಿದ್ದರೂ, ಗುಕೇಶ್​ ಕೊನೇ ಸುತ್ತಿನಲ್ಲೂ ಗೆದ್ದರೆ ಯಾವುದೇ ಲೆಕ್ಕಾಚಾರವಿಲ್ಲದೆ ವಿಶ್ವ ಚಾಂಪಿಯನ್​ಷಿಪ್​ ಪಂದ್ಯಕ್ಕೆ ಅರ್ಹತೆ ಪಡೆಯಲಿದ್ದಾರೆ. ಗುಕೇಶ್​ ಡ್ರಾಗೆ ತೃಪ್ತಿಪಟ್ಟರೂ, ಕರುವಾನ-ನೆಪೊಮ್ನಿಯಾಚಿ ನಡುವಿನ ಇನ್ನೊಂದು ಪಂದ್ಯ ಡ್ರಾಗೊಂಡರೆ ಟೈಬ್ರೇಕ್​ ಅಗತ್ಯವಿಲ್ಲದೆ ಕ್ಯಾಂಡಿಡೇಟ್ಸ್​ ಟೂರ್ನಿಯ ಪ್ರಶಸ್ತಿ ಗೆಲ್ಲಲಿದ್ದಾರೆ.

ಸ್ಪರ್ಧೆಯಲ್ಲಿರುವ ಇನ್ನಿಬ್ಬರು ಭಾರತೀಯರಾದ ಆರ್​. ಪ್ರಜ್ಞಾನಂದ (6ಅಂಕ) ಮತ್ತು ವಿದಿತ್​ ಗುಜರಾತಿ (5.5) ಕ್ರಮವಾಗಿ 5 ಮತ್ತು 6ನೇ ಸ್ಥಾನದಲ್ಲಿದ್ದಾರೆ. ಈಗಾಗಲೆ ಪ್ರಶಸ್ತಿ ರೇಸ್​ನಿಂದ ಹೊರಬಿದ್ದಿರುವ ಇವರಲ್ಲಿ 13ನೇ ಸುತ್ತಿನಲ್ಲಿ ಪ್ರಜ್ಞಾನಂದ ಸೋತರೆ, ವಿದಿತ್​ ಡ್ರಾಕ್ಕೆ ತೃಪ್ತಿಪಟ್ಟರು.

ವೈಶಾಲಿಗೆ ಸತತ 4ನೇ ಜಯ

ಮಹಿಳೆಯರ ವಿಭಾಗದಲ್ಲಿ ಆರ್​. ವೈಶಾಲಿ ಸತತ 4ನೇ ಜಯದೊಂದಿಗೆ ಬೀಗಿದರು. ಇದರೊಂದಿಗೆ ವೈಶಾಲಿ 6.5 ಅಂಕಗಳೊಂದಿಗೆ ಜಂಟಿ 3ನೇ ಸ್ಥಾನಕ್ಕೇರಿದ್ದಾರೆ. 13ನೇ ಸುತ್ತಿನಲ್ಲಿ ಡ್ರಾಕ್ಕೆ ತೃಪ್ತಿಪಟ್ಟ ಕೊನೆರು ಹಂಪಿ ಕೂಡ 6.5 ಅಂಕ ಹೊಂದಿದ್ದಾರೆ. ಇವರಿಬ್ಬರು ಈಗಾಗಲೆ ಪ್ರಶಸ್ತಿ ರೇಸ್​ನಿಂದ ಹೊರಬಿದ್ದಿದ್ದರೆ, ಚೀನಾದ ಟಾನ್​ ಜೊಂಗ್​ಯಿ 8.5 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಚೀನಾದ ಮತ್ತೋರ್ವ ಆಟಗಾರ್ತಿ ಲೀ ಟಿಂಗ್​ಜೀ 7.5 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದು, ಜೊಂಗ್​ಯಿಗೆ ಪ್ರಶಸ್ತಿ ಬಹುತೇಕ ಖಚಿತವೆನಿಸಿದೆ.