ಬೆಂಗಳೂರು: ಐಪಿಎಲ್ 17ನೇ ಆವೃತ್ತಿಗೆ ಪೂರ್ವಭಾವಿಯಾಗಿ ಎಲ್ಲ 10 ತಂಡಗಳು ಭಾನುವಾರವೇ ಆಟಗಾರರ ರಿಟೇನ್ ಪಟ್ಟಿ ಸಲ್ಲಿಸಿವೆ. ಆದರೆ ರಿಟೇನ್ ಮಾಡಿಕೊಂಡ ಆಟಗಾರರ ವರ್ಗಾವಣೆಗೆ ಇನ್ನೂ ಅವಕಾಶ ಮುಕ್ತವಾಗಿದೆ. ಡಿಸೆಂಬರ್ 12ರವರೆಗೂ ಇದಕ್ಕೆ ಅವಕಾಶವಿದೆ. ಹೀಗಾಗಿ ಸದ್ಯ ಮುಂಬೈ ಇಂಡಿಯನ್ಸ್ ತಂಡದಲ್ಲಿ ರಿಟೇನ್ ಆಗಿರುವ ಆಸೀಸ್ ಆಲ್ರೌಂಡರ್ ಕ್ಯಾಮರಾನ್ ಗ್ರೀನ್ ಆರ್ಸಿಬಿ ತಂಡಕ್ಕೆ ವರ್ಗಾವಣೆಯಾಗುವ ಬಗ್ಗೆ ವರದಿಗಳು ಹರಡಿವೆ.
ಕೆಲ ವರದಿಗಳ ಪ್ರಕಾರ, ಹಾರ್ದಿಕ್ ಪಾಂಡ್ಯ ಮುಂಬೈಗೆ ವರ್ಗಾವಣೆಯಾಗುವುದು ಬಹುತೇಕ ಖಚಿತವೆನಿಸಿದೆ. ಆಟಗಾರರ ರಿಟೇನ್ ಬಳಿಕ ಮುಂಬೈ ತಂಡ ಸದ್ಯ ಕೇವಲ 15.25 ಕೋಟಿ ರೂ. ಬಜೆಟ್ ಉಳಿಸಿಕೊಂಡಿದೆ. ಹೀಗಾಗಿ, ಕಳೆದ ಹರಾಜಿನಲ್ಲಿ 17.5 ಕೋಟಿ ರೂ. ಖರೀದಿಸಿದ್ದ ಆಸೀಸ್ ಆಲ್ರೌಂಡರ್ ಕ್ಯಾಮರಾನ್ ಗ್ರೀನ್ರನ್ನು ಮುಂಬೈ ತಂಡ ಆರ್ಸಿಬಿಗೆ ವರ್ಗಾವಣೆ ಮಾಡಲಿದೆ. ಜತೆಯಲ್ಲೇ 15 ಕೋಟಿ ರೂ. ಮೌಲ್ಯದ ಹಾರ್ದಿಕ್ರನ್ನು ಗುಜರಾತ್ ತಂಡದಿಂದ ಸೆಳೆದುಕೊಳ್ಳಲಿದೆ ಎನ್ನಲಾಗಿದೆ.
ಇನ್ನು ಕೆಲದಿನಗಳಲ್ಲಿ ವರ್ಗಾವಣೆ ಒಪ್ಪಂದ ಅಂತಿಮಗೊಳಿಸಿ ಮುಂಬೈ-ಗುಜರಾತ್ ತಂಡಗಳು ಅಧಿಕೃತ ಪ್ರಕಟಣೆ ಹೊರಡಿಸಲಿವೆ ಎನ್ನಲಾಗಿದೆ. ಗ್ರೀನ್ ಆರ್ಸಿಬಿಗೆ ವರ್ಗಾವಣೆ ಆಗದಿದ್ದರೆ, ಹಾರ್ದಿಕ್ ಪಾಂಡ್ಯರನ್ನು ಸೆಳೆಯಲು ಮುಂಬೈ ತಂಡ ಬಜೆಟ್ ಹೊಂದಿದ್ದರೂ, ನಂತರ ಹರಾಜಿನಲ್ಲಿ ಹೊಸ ಆಟಗಾರರ ಖರೀದಿಗೆ ಅದರ ಬಳಿ ಕೇವಲ 25 ಲಕ್ಷ ರೂ. ಉಳಿಯಲಿದೆ. ಹೀಗಾಗಿ ಗ್ರೀನ್ರನ್ನು ವರ್ಗಾವಣೆ ಮಾಡಬೇಕಾದ ಅನಿವಾರ್ಯತೆಯನ್ನು ಮುಂಬೈ ಎದುರಿಸುತ್ತಿದೆ.