ಕೋಲ್ಕತ: ಬಂಗಾಳ ಕ್ರಿಕೆಟ್ ಸಂಸ್ಥೆಯ (ಸಿಎಬಿ) ಸಿಬ್ಬಂದಿಯೊಬ್ಬರಿಗೆ ಕರೊನಾ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಸಿಎಬಿ ಮುಖ್ಯ ಕಚೇರಿ ಇರುವ ಐತಿಹಾಸಿಕ ಈಡನ್ ಗಾರ್ಡನ್ಸ್ ಕ್ರಿಕೆಟ್ ಕ್ರೀಡಾಂಗಣದ ಆವರಣವನ್ನು ಸಂಪೂರ್ಣ ಸೀಲ್ಡೌನ್ ಮಾಡಲಾಗಿದೆ. ಇನ್ನು 7 ದಿನಗಳ ಕಾಲ ಕ್ರೀಡಾಂಗಣ ಸಂಪೂರ್ಣವಾಗಿ ಬಂದ್ ಆಗಿರಲಿದೆ.
'ಸಿವಿಲ್ ಇಂಜಿನಿಯರ್ ಆಗಿರುವ ಚಂದನ್ ದಾಸ್ಗೆ ಕರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿದೆ. ಆತ ಸಿಎಬಿಯ ಟೆಂಪರರಿ ಸಿಬ್ಬಂದಿಯಾಗಿದ್ದಾನೆ. ಆತನಿಗೆ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮುಂದಿನ 7 ದಿನಗಳ ಕಾಲ ಕಚೇರಿಗೆ ಆಗಮಿಸದಂತೆ ನಮಗೆಲ್ಲರಿಗೂ ಸೂಚಿಸಲಾಗಿದೆ. ಇದೇ ವೇಳೆ ಈಡನ್ ಗಾರ್ಡನ್ಸ್ ಕ್ರೀಡಾಂಗಣದ ಸಂಪೂರ್ಣ ಆವರಣದ ಸ್ಯಾನಿಟೈಸ್ ನಡೆಯಲಿದೆ' ಎಂದು ಸಿಎಬಿ ಅಧ್ಯಕ್ಷ ಅವಿಷೇಕ್ ದಾಲ್ಮಿಯಾ ತಿಳಿಸಿದ್ದಾರೆ.
ಈಡನ್ ಗಾರ್ಡನ್ಸ್ ಕ್ರೀಡಾಂಗಣವನ್ನು ಕ್ರಿಕೆಟಿಗರ ಅಭ್ಯಾಸಕ್ಕೆ ಅಧಿಕೃತವಾಗಿ ತೆರೆದಿರಲಿಲ್ಲ. ಸಿಎಬಿ ಕಚೇರಿಯಲ್ಲೂ ಅಗತ್ಯವಿರುವ ಕೆಲ ಸಿಬ್ಬಂದಿಯಷ್ಟೇ ಕೆಲಸ ನಿರ್ವಹಿಸುತ್ತಿದ್ದರು ಎಂದು ಅವರು ತಿಳಿಸಿದ್ದಾರೆ. ಬಂಗಾಳದಲ್ಲೂ ಈಗ ದಿನದಿಂದ ದಿನಕ್ಕೆ ಕರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಇದೀಗ ಕೋಲ್ಕತ ನಗರದಲ್ಲೇ ಒಟ್ಟಾರೆ ಕರೊನಾ ಪ್ರಕರಣಗಳ ಸಂಖ್ಯೆ 7 ಸಾವಿರದ ಸನಿಹ ತಲುಪಿದೆ.