Ricky Ponting : ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಇಲ್ಲದೆ ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿಯನ್ನು ಆಡಬೇಕಾಗಿದೆ. ಬೆನ್ನುನೋವಿನಿಂದಾಗಿ ಬುಮ್ರಾ ಅವರು ಈ ಮೆಗಾ ಟೂರ್ನಮೆಂಟ್ಗೆ ಅಲಭ್ಯರಾಗಿದ್ದಾರೆ. ಬುಮ್ರಾ ಸ್ಥಾನಕ್ಕೆ ಯುವ ಬೌಲರ್ ಹರ್ಷಿತ್ ರಾಣಾ ಆಯ್ಕೆಯಾಗಿದ್ದಾರೆ. ಇದರ ನಡುವೆ ಆಸ್ಟ್ರೇಲಿಯಾದ ದಿಗ್ಗಜ ಆಟಗಾರ ರಿಕ್ಕಿ ಪಾಂಟಿಂಗ್, ಬುಮ್ರಾ ಸ್ಥಾನವನ್ನು ಯಾವ ಬೌಲರ್ ತುಂಬುತ್ತಾರೆ ಎಂಬುದನ್ನು ತಿಳಿಸಿದ್ದಾರೆ.
ರಿಕ್ಕಿ ಪಾಂಟಿಂಗ್ ಪ್ರಕಾರ, ಬುಮ್ರಾ ಸ್ಥಾನವನ್ನು ಅರ್ಷದೀಪ್ ಸಿಂಗ್ ತುಂಬಲಿದ್ದಾರೆ. ವಿಶ್ವ ದರ್ಜೆಯ ವೇಗದ ಬೌಲರ್ ಬುಮ್ರಾಗೆ ಯಾರೂ ಸರಿಸಾಟಿ ಇಲ್ಲ. ಆದರೆ, ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾದ ಬೌಲಿಂಗ್ ವಿಭಾಗದಲ್ಲಿ ಅರ್ಷದೀಪ್ ಸಿಂಗ್ ಪ್ರಮುಖ ಶಕ್ತಿಯಾಗಲಿದ್ದಾರೆ ಎಂದು ರಿಕ್ಕಿ ಪಾಂಟಿಂಗ್ ಹೇಳಿದ್ದಾರೆ. ಅಂದಹಾಗೆ ಚಾಂಪಿಯನ್ಸ್ ಟ್ರೋಫಿ ಇಂದಿನಿಂದ (ಫೆ.19) ಆರಂಭವಾಗಲಿದ್ದು, ಟೀಮ್ ಇಂಡಿಯಾ ಗುರುವಾರ ತನ್ನ ಮೊದಲ ಪಂದ್ಯವನ್ನು ಆಡಲಿದೆ.
ರೋಹಿತ್ ಪಡೆ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ. ದುಬೈನಲ್ಲಿ ಈ ಪಂದ್ಯ ನಡೆಯಲಿದೆ. ಇದಾದ ನಂತರ ಫೆ. 23 ರಂದು ಪಾಕಿಸ್ತಾನ ಮತ್ತು ಮಾರ್ಚ್ 2 ರಂದು ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ ಸೆಣಸಲಿದೆ. ಇದೇ ಸಂದರ್ಭದಲ್ಲಿ ರಿಕ್ಕಿ ಪಾಂಟಿಂಗ್ ಐಸಿಸಿ ರಿವ್ಯೂ ಶೋನ ಭಾಗವಾಗಿ ಐಸಿಸಿ ಈವೆಂಟ್‌ನಲ್ಲಿ ಭಾರತದ ಅಂತಿಮ ತಂಡದಲ್ಲಿ ಆಡುವ ವೇಗಿಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ನಾನು ಬುಮ್ರಾ ಬದಲಿಗೆ ಅವರ ಸ್ಥಾನವನ್ನು ಅರ್ಷದೀಪ್ ಸಿಂಗ್‌ಗೆ ನೀಡುತ್ತೇನೆ. ಅವರು ಟಿ20 ಕ್ರಿಕೆಟ್‌ನಲ್ಲಿ ಹೇಗೆ ಆಡುತ್ತಾರೆಂದು ಎಲ್ಲರಿಗೂ ತಿಳಿದಿದೆ. ಅರ್ಷ ಅವರ ಕೌಶಲ್ಯದ ಬಗ್ಗೆ ಹೇಳುವುದಾದರೆ, ಬುಮ್ರಾ ಅವರಂತೆಯೇ ಅವರು ಹೊಸ ಚೆಂಡಿನೊಂದಿಗೆ ಆರಂಭಿಕ ಓವರ್‌ಗಳಲ್ಲಿ ಅದ್ಭುತಗಳನ್ನು ಮಾಡಬಹುದು. ಇದಲ್ಲದೆ, ಡೆತ್ ಓವರ್‌ಗಳಲ್ಲಿಯೂ ಮಿಂಚಬಹುದು. ಏನೇ ಇರಲಿ, ಬುಮ್ರಾ ಇಲ್ಲದಿರುವುದು ಟೀಮ್ ಇಂಡಿಯಾಕ್ಕೆ ನಷ್ಟವಾಗಲಿದೆ. ಆದಾಗ್ಯೂ, ಅರ್ಷದೀಪ್ ಬುಮ್ರಾ ಅವರ ಕೊರತೆಯನ್ನು ಸ್ವಲ್ಪ ಮಟ್ಟಿಗೆ ತುಂಬಬಹುದು. ಹರ್ಷಿತ್ ರಾಣಾ ಕೂಡ ಒಬ್ಬ ಪ್ರತಿಭಾನ್ವಿತ ವೇಗದ ಬೌಲರ್ ಎಂಬುದರಲ್ಲಿ ಸಂದೇಹವಿಲ್ಲ. ಆದರೆ, ಅವರಲ್ಲಿ ಅರ್ಷದೀಪ್ ಬಳಿಯಿರುವ ಕೌಶಲ್ಯವಿಲ್ಲ. ಅದಕ್ಕಾಗಿಯೇ ನನ್ನ ಮತ ಅರ್ಷದೀಪ್ಗೆ ಎಂದು ರಿಕ್ಕಿ ಪಾಂಟಿಂಗ್ ಹೇಳಿದರು.
ಅಂದಹಾಗೆ ಎಡಗೈ ವೇಗಿ ಅರ್ಷದೀಪ್ ಸಿಂಗ್ ಅವರು ಕೇವಲ ಒಂಬತ್ತು ಏಕದಿನ ಪಂದ್ಯಗಳನ್ನು ಆಡಿದ್ದರೆ, ಹರ್ಷಿತ್ ರಾಣಾ ಇತ್ತೀಚೆಗೆ ಪಾದರ್ಪಣೆ ಮಾಡಿದರು. ಅರ್ಷದೀಪ್ ಇದುವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 14 ವಿಕೆಟ್‌ಗಳನ್ನು ಪಡೆದಿದ್ದಾರೆ. ಇನ್ನು ಅರ್ಷದೀಪ್ ಅವರ ಲಿಸ್ಟ್-'ಎ' ಅಂಕಿಅಂಶಗಳು ಉತ್ತಮವಾಗಿವೆ. ಅವರು 33 ಪಂದ್ಯಗಳಲ್ಲಿ 55 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. 63 ಪಂದ್ಯಗಳಲ್ಲಿ 99 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಮತ್ತೊಂದೆಡೆ, ಹರ್ಷಿತ್ ರಾಣಾ ಇದುವರೆಗೆ ಟೀಮ್ ಇಂಡಿಯಾ ಪರ ಎರಡು ಟೆಸ್ಟ್, ಮೂರು ಏಕದಿನ ಮತ್ತು ಒಂದು ಟಿ20 ಪಂದ್ಯಗಳನ್ನು ಆಡಿದ್ದಾರೆ, ಆಯಾ ಸ್ವರೂಪಗಳಲ್ಲಿ ಕ್ರಮವಾಗಿ 4, 6 ಮತ್ತು 3 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿಯನ್ನು ಆಡಲಿರುವ ಟೀಮ್ ಇಂಡಿಯಾದಲ್ಲಿ ವೇಗದ ಬೌಲಿಂಗ್ ವಿಭಾಗದಲ್ಲಿ ಯುವ ವೇಗಿಗಳಾದ ಅರ್ಷದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾ ಜತೆಗೆ ಹಿರಿಯ ವೇಗಿ ಮೊಹಮ್ಮದ್ ಶಮಿ ಇರಲಿದ್ದಾರೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್)