ಕ್ರೀಡೆ

ವೆಸ್ಟ್​ ಇಂಡೀಸ್​ ವಿರುದ್ಧದ ಎರಡೂ ಟೆಸ್ಟ್​ಗಳಲ್ಲಿ ಬುಮ್ರಾ ಕಣಕ್ಕೆ!

ನವದೆಹಲಿ: ಏಷ್ಯಾಕಪ್ ಟಿ20 ಟೂರ್ನಿ​ ಮುಗಿದ ಮೂರೇ ದಿನಗಳಲ್ಲಿ ತವರಿನಲ್ಲಿ ಪ್ರವಾಸಿ ವೆಸ್ಟ್​ ಇಂಡೀಸ್​ ವಿರುದ್ಧದ ಟೆಸ್ಟ್​ ಸರಣಿ ಶುರುವಾಗುತ್ತಿದ್ದರೂ, ವೇಗಿ ಜಸ್​ಪ್ರೀತ್​ ಬುಮ್ರಾಗೆ ಸ್ಥಾನ ಕಲ್ಪಿಸಲಾಗಿದೆ. ಕಾರ್ಯದೊತ್ತಡ ತಗ್ಗಿಸಲು ಬುಮ್ರಾಗೆ ವಿಶ್ರಾಂತಿ ನೀಡುವ ನಿರೀಕ್ಷೆ ಹುಸಿಯಾಗಿದ್ದು, ಸರಣಿಯ 2 ಪಂದ್ಯಗಳಲ್ಲೂ ಬುಮ್ರಾ ಆಡಲಿದ್ದಾರೆ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್​ ಸ್ಪಷ್ಟಪಡಿಸಿದ್ದಾರೆ.

ಕಳೆದ ಇಂಗ್ಲೆಂಡ್​ ಪ್ರವಾಸದ 5 ಟೆಸ್ಟ್​ಗಳಲ್ಲಿ ಬುಮ್ರಾ 2ರಲ್ಲಿ ಮಾತ್ರ ಆಡಿದ್ದರು. "ಇಂಗ್ಲೆಂಡ್​ ಪ್ರವಾಸದ ಬಳಿಕ ಬುಮ್ರಾಗೆ ಸೂಕ್ತ ವಿಶ್ರಾಂತಿ ಲಭಿಸಿದೆ. ಅಲ್ಲದೆ ಇಂಗ್ಲೆಂಡ್​ನಲ್ಲೂ ಕೊನೇ ಟೆಸ್ಟ್​ ಆಡಿರಲಿಲ್ಲ' ಎಂದು ಅಗರ್ಕರ್​ ತಿಳಿಸಿದ್ದಾರೆ.

ಕರುಣ್​ಗೆ ಮುಚ್ಚಿದ ಬಾಗಿಲು

ಡಿಯರ್​ ಕ್ರಿಕೆಟ್​ ನನಗೆ ಎರಡನೇ ಅವಕಾಶ ಕೊಡು ಎಂದು ಸಾಮಾಜಿಕ ಜಾಲತಾಣದಲ್ಲಿ ಮನವಿ ಸಲ್ಲಿಸಿ, ದೇಶೀಯ ಕ್ರಿಕೆಟ್​ನಲ್ಲಿ ರನ್​ಮಳೆ ಹರಿಸುವ ಮೂಲಕ 8 ವರ್ಷಗಳ ಬಳಿಕ ಭಾರತ ತಂಡಕ್ಕೆ ಮರಳಿದ್ದ ಕನ್ನಡಿಗ ಕರುಣ್​ ನಾಯರ್​ ಇಂಗ್ಲೆಂಡ್​ ಪ್ರವಾಸದಲ್ಲಿ ನಿರೀಕ್ಷಿತ ನಿರ್ವಹಣೆ ತೋರಿರಲಿಲ್ಲ. ಹೀಗಾಗಿ ವಿಂಡೀಸ್​ ಸರಣಿಗೆ ಸ್ಥಾನ ಉಳಿಸಿಕೊಳ್ಳಲು ವಿಲರಾಗಿದ್ದಾರೆ. ಅಲ್ಲದೆ, 33 ವರ್ಷದ ಕರುಣ್​ರನ್ನು ಭವಿಷ್ಯದಲ್ಲಿ ಮತ್ತೆ ಆಯ್ಕೆಗೆ ಪರಿಗಣಿಸದಿರುವ ಸುಳಿವನ್ನೂ ಅಗರ್ಕರ್​ ರವಾನಿಸಿದ್ದಾರೆ. "ಇಂಗ್ಲೆಂಡ್​ನಲ್ಲಿ ಆಡಿದ 8 ಇನಿಂಗ್ಸ್​ಗಳಲ್ಲಿ ಕೇವಲ 1 ಅರ್ಧಶತಕ ಗಳಿಸಿದ ಕರುಣ್​, ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಲಿಲ್ಲ. ನಾವು ಅವರಿಂದ ಇನ್ನೂ ಹೆಚ್ಚಿನ ಕೊಡುಗೆ ನಿರೀಕ್ಷಿಸಿದ್ದೆವು. ಈ ಸಮಯದಲ್ಲಿ 15-20 ಟೆಸ್ಟ್​ ಅವಕಾಶ ನೀಡಲು ಸಾಧ್ಯವಿಲ್ಲ. ಹೀಗಾಗಿ ಇನ್ನು ಪಡಿಕ್ಕಲ್​ಗೆ ಹೆಚ್ಚಿನ ಅವಕಾಶ ನೀಡಲು ಬಯಸಿದ್ದೇವೆ. ಪಡಿಕ್ಕಲ್​ ಈಗಾಗಲೆ ಆಡಿರುವ ಕೆಲ ಟೆಸ್ಟ್​ಗಳಲ್ಲಿ ಭರವಸೆಯ ನಿರ್ವಹಣೆ ತೋರಿದ್ದಾರೆ' ಎಂದು ಅಗರ್ಕರ್​ ವಿವರಿಸಿದರು. ಕನಿಷ್ಠ ಶೇಷ ಭಾರತ ತಂಡದಲ್ಲೂ ಕರುಣ್​ಗೆ ಸ್ಥಾನ ಕಲ್ಪಿಸಲಾಗಿಲ್ಲ.