ಬೆಂಗಳೂರು: ಕನ್ನಡತಿಯರಾದ ಉನ್ನತಿ ಅಯ್ಯಪ್ಪ ಮತ್ತು ನಿಯೋಲ್ ಅನ್ನಾ ಕಾರ್ನೆಲಿಯೊ ದುಬೈನಲ್ಲಿ ನಡೆಯುತ್ತಿರುವ ಏಷ್ಯನ್ 20 ವಯೋಮಿತಿ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದಾರೆ. ಕೂಟದ 4ನೇ ಹಾಗೂ ಅಂತಿಮ ದಿನವಾದ ಶನಿವಾರ ನಡೆದ ಮಹಿಳೆಯರ 100 ಮೀ. ಹರ್ಡಲ್ಸ್ ಸ್ಪರ್ಧೆಯಲ್ಲಿ ಉನ್ನತಿ 13.66 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸಿ ಕಂಚು ಗೆದ್ದರು. ಉನ್ನತಿ ರಾಜ್ಯದ ಮಾಜಿ ಒಲಿಂಪಿಯನ್ ಅಥ್ಲೀಟ್ ಪ್ರಮೀಳಾ ಅಯ್ಯಪ್ಪ ಅವರ ಪುತ್ರಿಯಾಗಿದ್ದಾರೆ.
ನಿಯೋಲ್ ಒಳಗೊಂಡ ಭಾರತ ತಂಡ ಮಹಿಳೆಯರ 4/100 ಮೀ. ರಿಲೇ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿತು. ಇದರೊಂದಿಗೆ ಭಾರತ ಕೂಟದಲ್ಲಿ 7 ಚಿನ್ನ, 11 ಬೆಳ್ಳಿ ಮತ್ತು 12 ಕಂಚು ಒಳಗೊಂಡ 30 ಪದಕ ಗೆಲುವಿನೊಂದಿಗೆ ಶ್ರೇಷ್ಠ ನಿರ್ವಹಣೆ ತೋರಿದೆ. 2023ರ ಆವೃತ್ತಿಯಲ್ಲಿ 19 ಪದಕ ಗೆದ್ದಿದ್ದು ಹಿಂದಿನ ದಾಖಲೆ.
ಲಕ್ಷಿತಾಗೆ ಬೆಳ್ಳಿ: ಲಕ್ಷಿತಾ ವಿನೋದ್ ಸ್ಯಾಂಡಿಲ್ಯಾ ಮಹಿಳೆಯರ 1,500 ಮೀ. ಓಟದಲ್ಲಿ ಬೆಳ್ಳಿ ಪದಕ ಗೆದ್ದರು. ಅವರು ಕೂಟದ 800 ಮೀ. ಓಟದಲ್ಲೂ ಬೆಳ್ಳಿ ಪದಕ ಜಯಿಸಿದ್ದರು.
ಪೋಲ್ವಾಲ್ಟ್ನಲ್ಲಿ ಐತಿಹಾಸಿಕ ಪದಕ: ಭಾರತ ಕೂಟದ ಪುರುಷರ ಪೋಲ್ವಾಲ್ಟ್ ಸ್ಪರ್ಧೆಯಲ್ಲಿ 38 ವರ್ಷಗಳಲ್ಲಿ ಮೊದಲ ಪದಕ ಗೆದ್ದು ಇತಿಹಾಸ ಬರೆಯಿತು. ದೇವ್ ಮೀನಾ 5.10 ಮೀ. ಎತ್ತರ ಹಾರುವ ಮೂಲಕ ಈ ಸಾಧನೆ ಮಾಡಿದರು. 4/400 ಮೀ. ಮಿಶ್ರ ರಿಲೇ ವಿಭಾಗದಲ್ಲಿ ಭಾರತ ತಂಡ ಬೆಳ್ಳಿ ಪದಕ ಜಯಿಸಿತು.