ಕ್ರೀಡೆ

WWE ಕುಸ್ತಿಪಟು ಬ್ರೇ ವ್ಯಾಟ್ ಹೃದಯಾಘಾತದಿಂದ ನಿಧನ

ನವದೆಹಲಿ: WWEನ ಸ್ಟಾರ್ ಕುಸ್ತಿಪಟು, ಮಾಜಿ ಚಾಂಪಿಯನ್ ಬ್ರೇ ವ್ಯಾಟ್ ಗುರುವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

WWE ಮುಖ್ಯ ಕಂಟೆಂಟ್ ಆಫೀಸರ್ ಟ್ರಿಪಲ್ ಎಚ್, ಇದನ್ನು ಅಧಿಕೃತವಾಗಿ ಖಚಿತಪಡಿಸಿದ್ದಾರೆ. ಬ್ರೇ ವ್ಯಾಟ್ ಅವರ ನಿಜವಾದ ಹೆಸರು  ವಿಂಡ್‌ಹ್ಯಾಮ್ ರೊಟುಂಡಾ. ಅವರಿಗೆ 36 ವರ್ಷ. ಬ್ರೇ ವ್ಯಾಟ್ ಕೆಲ ದಿನಗಳಿಂದ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು. ಬ್ರೇ ವ್ಯಾಟ್ ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರ ನಿಧನಕ್ಕೆ ಕುಟುಂಬ ಸದಸ್ಯರಿಗೆ ಸಂತಾಪ ಎಂದು ಟ್ವೀಟ್​​ ಮಾಡಿದ್ದಾರೆ.

WWEನಲ್ಲಿನ ಹೆಚ್ಚು ಹೆಸರುವಾಸಿಯಾದ ಬ್ರೇ ವ್ಯಾಟ್, 2023  ಆಗಸ್ಟ್ 24ರಂದು 36 ನೇ ವಯಸ್ಸಿನಲ್ಲಿ ನಿಧನರಾದರು. ಹೃದಯಾಘಾತವು ಅವರ ಹಠಾತ್ ಸಾವಿಗೆ ಕಾರಣ ಎಂದು ಹೇಳಲಾಗಿದೆ. ವರ್ಷದ ಆರಂಭದಲ್ಲಿ ಅವರು COVID-19 ಸೋಂಕಿಗೆ ಒಳಗಾಗಿದ್ದರು. ಅವರ ಆರೋಗ್ಯವು ಮತ್ತಷ್ಟು ಜಟಿಲವಾಗಿತ್ತು ಹೀಗಾಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ವಿಂಡ್‌ಹ್ಯಾಮ್ ರೊಟುಂಡಾ ಮೇ 23, 1987 ರಂದು ಫ್ಲೋರಿಡಾದ ಬ್ರೂಕ್ಸ್‌ವಿಲ್ಲೆಯಲ್ಲಿ ಜನಿಸಿದರು. 2009ರಲ್ಲಿ ಕುಸ್ತಿಪಟು ಆಗಿ ವೃತ್ತಿ ಆರಂಭಿಸಿದರು. ವ್ಯಾಟ್ ಅವರ ಪ್ರತಿಭೆಯು 2012ರ ಹೊತ್ತಿಗೆ WWE ಗಮನವನ್ನು ಸೆಳೆದಿತ್ತು. ಅವರ ಕೊನೆಯ ಪಂದ್ಯ 2023 ರಾಯಲ್ ರಂಬಲ್‌ನಲ್ಲಿತ್ತು. ವ್ಯಾಟ್ ತನ್ನ ವೃತ್ತಿಜೀವನದಲ್ಲಿ ಒಂದು WWE ಚಾಂಪಿಯನ್‌ಶಿಪ್ ಮತ್ತು ಎರಡು ಯೂನಿವರ್ಸಲ್ ಚಾಂಪಿಯನ್‌ಶಿಪ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಬ್ರೇ ವ್ಯಾಟ್ ಇತ್ತೀಚೆಗೆ WWE ನಲ್ಲಿ ಕಾಣಿಸಿಕೊಂಡಿಲ್ಲ.