Bomb Blast : ಕ್ರಿಕೆಟ್ ಪಂದ್ಯ ನಡೆಯುತ್ತಿರುವಾಗ ಮೈದಾನದಲ್ಲಿ ಬಾಂಬ್ ಸ್ಫೋಟಗೊಂಡ ಆಘಾತಕಾರಿ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಈ ದುರ್ಘಟನೆಯಲ್ಲಿ ಓರ್ವ ವ್ಯಕ್ತಿ ಸಾವಿಗೀಡಾಗಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ.
ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ. ಕ್ರಿಕೆಟ್ ಮೈದಾನದಲ್ಲಿ ಸ್ಫೋಟದ ನಂತರ, ಸುತ್ತಲೂ ದಟ್ಟ ಹೊಗೆ ಕಾಣಿಸಿಕೊಂಡಿತು. ಈ ಅನಿರೀಕ್ಷಿತ ಬೆಳವಣಿಗೆಯು ಕ್ರಿಕೆಟ್ ಆಟಗಾರರು ಮತ್ತು ಅಲ್ಲಿದ್ದ ಪ್ರೇಕ್ಷಕರನ್ನು ಭಯಭೀತರಾಗಿ ಓಡುವಂತೆ ಮಾಡಿತು. ಇದು ಸಣ್ಣಪುಟ್ಟ ಕಾಲ್ತುಳಿತಕ್ಕೂ ಕಾರಣವಾಯಿತು. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಬಜೌರ್ ಜಿಲ್ಲೆಯ ಖಾರ್ ತೆಹಸಿಲ್‌ನಲ್ಲಿರುವ ಕೌಸರ್ ಕ್ರಿಕೆಟ್ ಮೈದಾನದಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಸ್ಫೋಟದ ನಂತರ ಆಟಗಾರರು ಸ್ಥಳದಿಂದ ಓಡಿಹೋಗುತ್ತಿರುವುದು ವೈರಲ್ ವಿಡಿಯೋದಲ್ಲಿ ಕಂಡುಬಂದಿದೆ. ಒಂದು ವಾರದ ಹಿಂದಷ್ಟೇ, ಖೈಬರ್ ಪಖ್ತುನ್ಖ್ವಾದ ಪೊಲೀಸ್ ಠಾಣೆಯ ಮೇಲೆ ಕ್ವಾಡ್‌ಕಾಪ್ಟರ್ ಸಹಾಯದಿಂದ ದಾಳಿ ನಡೆಸಲಾಯಿತು. ಈ ದಾಳಿಯಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಮತ್ತು ನಾಗರಿಕರೊಬ್ಬರು ಗಾಯಗೊಂಡಿದ್ದರು. ಇದೀಗ ಅದೇ ಸ್ಥಳದಲ್ಲಿ ಮತ್ತೊಮ್ಮೆ ದಾಳಿಯಾಗಿದೆ. ಪಾಕಿಸ್ತಾನದಲ್ಲಿ ಇಂತಹ ದಾಳಿಗಳು ಹೊಸದೇನಲ್ಲ. ಉಗ್ರರ ಸ್ವರ್ಗ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಪಾಕ್ನಲ್ಲಿ ಇಂತಹ ದಾಳಿಗಳು ಸಾಮಾನ್ಯವಾಗಿಬಿಟ್ಟಿವೆ.
ಸುಧಾರಿತ ಸ್ಫೋಟಕ ಸಾಧನವನ್ನು ಬಳಸಿ ದಾಳಿ ನಡೆಸಲಾಗಿದೆ ಎಂದು ಬಜೌರ್ ಜಿಲ್ಲಾ ಪೊಲೀಸ್ ಅಧಿಕಾರಿ ವಕಾಸ್ ರಫೀಕ್ ಹೇಳಿದ್ದಾರೆ. ದಾಳಿಯಲ್ಲಿ ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದು, ಕೆಲವು ಮಕ್ಕಳು ಕೂಡ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವು ವಾರಗಳ ಹಿಂದೆ ಭದ್ರತಾ ಪಡೆಗಳು ಆರಂಭಿಸಿದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಾದ ಆಪರೇಷನ್ ಸರ್ಬಕಾಫ್‌ಗೆ ಪ್ರತಿಯಾಗಿ ಭಯೋತ್ಪಾದಕರು ಈ ದಾಳಿಗಳನ್ನು ನಡೆಸಿದ್ದಾರೆ ಎಂದು ಭದ್ರತಾ ಅಧಿಕಾರಿಗಳು ಶಂಕಿಸಿದ್ದಾರೆ. (ಏಜೆನ್ಸೀಸ್)