ಕ್ರೀಡೆ

ಭಾರ ಎತ್ತುವಾಗ ಕುತ್ತಿಗೆ ಮುರಿದುಹೋಗಿ ಸಾವಿಗೀಡಾದ ಬಾಡಿಬಿಲ್ಡರ್!

ನವದೆಹಲಿ: ಜಿಮ್​ಗಳಲ್ಲಿ ಶಕ್ತಿ ಮೀರಿ ವರ್ಕೌಟ್ ಮಾಡುವವರಿಗೆ ಇದು ಎಚ್ಚರಿಕೆ ಗಂಟೆ ಎಂದರೂ ತಪ್ಪೇನಲ್ಲ. ದೇಹ ದಂಡಿಸುವಾಗ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎಂಬುದಕ್ಕೆ ಈ ಪ್ರಕರಣ ನಿದರ್ಶನ. ಏಕೆಂದರೆ ಇಲ್ಲೊಬ್ಬ ಬಾಡಿಬಿಲ್ಡರ್​ ಭಾರ ಎತ್ತುವಾಗ ಕುತ್ತಿಗೆ ಮುರಿದು ಹೋಗಿ ಸಾವಿಗೀಡಾದ ಪ್ರಕರಣ ನಡೆದಿದೆ. 33 ವರ್ಷದ ಈತ 210 ಕೆ.ಜಿ. ತೂಕ ಎತ್ತುವಾಗ ಈ ಅವಘಡ ಸಂಭವಿಸಿದೆ.

ಅಂತಾರಾಷ್ಟ್ರೀಯ ಖ್ಯಾತಿಯ ಬಾಡಿಬಿಲ್ಡರ್​, ಫಿಟ್​ನೆಸ್​ ಇನ್​ಫ್ಲೂಯೆನ್ಸರ್ ಕೂಡ ಆಗಿರುವ ಜಸ್ಟಿನ್ ವಿಕ್ಕಿ ಎಂಬ ಈತ ಇಂಡೋನೇಷ್ಯಾದ ಬಾಲಿಯ ಜಿಮ್​ವೊಂದರಲ್ಲಿ ಭಾರ ಎತ್ತುವಾಗ ಈ ಅವಘಡ ಸಂಭವಿಸಿದೆ. 210 ಕೆ.ಜಿ. ಭಾರವನ್ನು ಈತ ಎತ್ತುವಾಗ ಅದನ್ನು ತಡೆದುಕೊಳ್ಳಲಾಗದೆ ಅಲ್ಲೇ ಕುಸಿದಿದ್ದಾನೆ.

ಆಗ ಬಾರ್​ಬೆಲ್​ ಕುತ್ತಿಗೆ ಮೇಲೆ ಬಿದ್ದು ಆ ಭಾರಕ್ಕೆ ಕತ್ತಿನ ಮೂಳೆ ಮುರಿದುಹೋಗಿದೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತಾದರೂ ಆತ ಚಿಕಿತ್ಸೆ ಫಲಕಾರಿಯಾಗಿದೆ ಸಾವಿಗೀಡಾಗಿದ್ದಾನೆ. ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. -ಏಜೆನ್ಸೀಸ್