ಕ್ರೀಡೆ

ಐಪಿಎಲ್ ಆರಂಭಕ್ಕೂ ಮುನ್ನ ಮುಂಬೈ ಇಂಡಿಯನ್ಸ್​ಗೆ ಶಾಕ್​; ಗಾಯದಿಂದಾಗಿ ಜಸ್ಪ್ರೀತ್ ಬುಮ್ರಾ ಔಟ್​!

ಮುಂಬೈ: ವಿಶ್ವದ ಮಿಲಿಯನ್ ಡಾಲರ್ ಟೂರ್ನಿಗಳಲ್ಲಿ ಒಂದಾದ ಐಪಿಎಲ್ ಆರಂಭವಾಗುವುದಕ್ಕೆ ದಿನಗಣನೆ ಆರಂಭವಾಗಿದ್ದು, ಟೂರ್ನಿಯನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದು, ಎಲ್ಲಾ ತಂಡಗಳು ಈಗಾಗಲೇ ಅಭ್ಯಾಸವನ್ನು ಆರಂಭಿಸಿದೆ. 2024ರ ವರ್ಷಾಂತ್ಯದಲ್ಲಿ ನಡೆದ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಭರ್ಜರಿ ಪಿಕ್​ಗಳನ್ನು ಮಾಡುವ ಮೂಲಕ ಗಮನ ಸೆಳೆದಿದ್ದ ಮುಂಬೈ ಇಂಡಿಯನ್ಸ್ ತಂಡವು ಈ ಬಾರಿ ಕಪ್ ಗೆಲ್ಲುವ ಮುನ್ಸೂಚನೆಯನ್ನು ನೀಡಿದೆ.

ಮಾರ್ಚ್​ 22ರಂದು ಈ ಬಾರಿಯ ಟೂರ್ನಿ ಆರಂಭವಾಗಲಿದ್ದು, ಹಾಲಿ ಚಾಂಪಿಯನ್​​ ಕೆಕೆಆರ್​ ಹಾಗೂ ಆರ್​ಸಿಬಿ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಮಾರ್ಚ್​ 23ರಂದು ಮುಂಬೈ ತಂಡ ಕಣಕ್ಕಿಳಿಯಲಿದ್ದು, ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್​​ಕಿಂಗ್ಸ್​ ಸವಾಲನ್ನು ಎದುರಿಸಲಿದೆ. ಆದರೆ, ಟೂರ್ನಿ ಆರಂಭವಾಗುವುದಕ್ಕೆ ಮುನ್ನ ಮುಂಬೈ ಇಂಡಿಯನ್ಸ್ ತಂಡಕ್ಕೆ ದೊಡ್ಡ ಹೊಡೆತವೊಂದು ಬಿದ್ದಿದ್ದು, ತಂಡದ ಸ್ಟಾರ್ ವೇಗಿ ಜಸ್ಪ್ರೀತ್​ ಬುಮ್ರಾ (Jasprit Bumrah) ಲಭ್ಯರಾಗುವುದು ಡೌಟ್ ಎಂದು ಹೇಳಲಾಗಿದೆ.

ಬೆನ್ನು ನೋವಿನಿಂದ ಬಳಲುತ್ತಿರುವ ಟೀಮ್ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್​ ಬಮ್ರಾ (Jasprit Bumrah) ಸದ್ಯ ವಿಶ್ರಾಂತಿ ಪಡೆಯುತ್ತಿದ್ದು, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನಕ್ಕೆ ಒಳಗಾಗಿದ್ದಾರೆ. ಬಾರ್ಡರ್​-ಗವಾಸ್ಕರ್​ ಟ್ರೋಫಿ ಟೆಸ್ಟ್​ ಸರಣಿ ಬಳಿಕ ಬೆನ್ನು ನೋವಿಗೆ ತುತ್ತಾಗಿದ್ದ ಬುಮ್ರಾ ಚಾಂಪಪಿಯನ್ಸ್ ಟ್ರೋಫಿಯಿಂದಲೂ ಹೊರಗುಳಿದಿದ್ದರು. ಐಪಿಎಲ್ ವೇಳೆಗೆ ಫಿಟ್ ಆಗುತ್ತಾರೆ ಎಂದು ಹೇಳಲಾಗಿತ್ತಾದರೂ. ಸದ್ಯ ಬುಮ್ರಾ ಐಪಿಎಲ್​ನಲ್ಲಿ ಆಡುವುದು ಡೌಟ್ ಎಂದು ಹೇಳಲಾಗಿದೆ.

ಕೆಲ ದಿನಗಳ ಹಿಂದೆ ಮುಂಬೈ ಇಂಡಿಯನ್ಸ್ ತಂಡದ ಅಭ್ಯಾಸ ಶಿಬಿರದಲ್ಲಿ ಕಾಣಿಸಿಕೊಂಡಿದ್ದ ಬುಮ್ರಾ ಐಪಿಎಲ್​ನಲ್ಲಿ ಕಾಣಿಸಿಕೊಳ್ಳುವ ಮುನ್ಸೂಚನೆಯನ್ನು ನೀಡಿದ್ದರು. ಆದರೆ, ಫಿಟ್​​ನೆಸ್ ಪರೀಕ್ಷೆಯಲ್ಲಿ ಬುಮ್ರಾ ಸಂಪೂರ್ಣವಾಗಿ ಗುಣಮುಖರಾಗಿಲ್ಲ ಎಂದು ತಿಳಿದು ಬಂದಿದ್ದು, ಮತ್ತೊಂದಷ್ಟು ದಿನಗಳ ಕಾಲ ಅವರು ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ. ಹೀಗಾಗಿ ಐಪಿಎಲ್​ನ ಆರಂಭಿಕ ಪಂದ್ಯಗಳಿಗೆ ಅವರು ಅಲಭ್ಯರಾಗುವುದು ಬಹುತೇಕ ಖಚಿತವಾಗಿದೆ.

ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ, ಐಪಿಎಲ್ ಆರಂಭವಾದ ಎರಡು ಆರಂಭವಾದ ಮೊದಲೆರಡು ವಾರಗಳ ಬಳಿಕ ಬುಮ್ರಾ (Jasprit Bumrah) ಮುಂಬೈ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ಹೇಳಲಾಗಿದ್ದು, ತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಬುಮ್ರಾ ಜಾಗವನ್ನು ತುಂಬಬಲ್ಲ ಸಮರ್ಥ ಆಟಗಾರನನ್ನು ಮುಂಬೈ ಫ್ರಾಂಚೈಸಿ ಹುಡುಕಾಡುತ್ತಿದೆ.