ಕೊಪ್ಪಳ: ಜಿಲ್ಲೆಯಲ್ಲಿ ಪ್ರತಿಭೆಗಳಿಗೇನು ಕೊರತೆಯಿಲ್ಲ. ಅದರಲ್ಲೂ ಇಲ್ಲಿನವರು ಕ್ರೀಡೆಗಳಲ್ಲಿ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದ್ದಲ್ಲಿ ಸದ್ದು ಮಾಡುತ್ತಿದ್ದಾರೆ. ಇದೀಗ ಗಂಗಾವತಿಯ ಚಿಕ್ಕಬೆಣಕಲ್ ಗ್ರಾಮದ ಯುವಕನೊಬ್ಬ ಅಂಧರ ಟಿ20 ವಿಶ್ವಕಪ್ ಗೆ ಆಯ್ಕೆಯಾಗಿದ್ದಾನೆ.
ಹೌದು. ಗಂಗಾವತಿ ಮೂಲದ ಲೋಕೇಶ್ ಡಿಸೆಂಬರ್ 6 ರಂದು ನಡೆಯಲಿರುವ ಟಿ20 ವಿಶ್ವಕಪ್ಗೆ ಆಯ್ಕೆಯಾಗಿದ್ದು ಟಿ20 ಪಂದ್ಯಾವಳಿಯಲ್ಲಿ ಆಡಲಿದ್ದಾರೆ. ಲೋಕೇಶ್ ದೃಷ್ಟಿಹೀನರಾಗಿದ್ದು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬಿಎ ಪೂರ್ಣಗೊಳಿಸಿದ್ದಾರೆ.
ಲೋಕೆಶ್ ಕರ್ನಾಟಕದ ಅಂಧರ ಟೀಮ್ನ ಅತ್ಯಾಕರ್ಷಕ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಹಾಗೂ ಅತ್ಯುತ್ತಮ ಫೀಲ್ಡರ್ ಕೂಡ ಆಗಿದ್ದಾರೆ. ಬಾಲ್ಯದಲ್ಲಿ ನಡೆದ ಒಂದು ಅಹಿತಕರ ಘಟನೆಯಿಂದ, ಬಲಗಣ್ಣಿನ ದೃಷ್ಟಿಯನ್ನು ಕಳೆದುಕೊಂಡ ಲೋಕೇಶ್, 2009 ರಿಂದ ಸಮರ್ಥನಂ ಸಂಸ್ಥೆಯಲ್ಲಿ ಕ್ರಿಕೆಟ್ ಅಭ್ಯಾಸ ಮಾಡುತ್ತಿದ್ದರು.
ಸಮರ್ಥವಾಗಿ ಆಡುತ್ತಿದ್ದ ಲೋಕೇಶ್ 2016 ರಲ್ಲಿ ಕೊಚ್ಚಿಯಲ್ಲಿ ನಡೆದ ಏಷ್ಯಾ ಕಪ್‌ನಲ್ಲಿ ನೇಪಾಳದ ವಿರುದ್ಧ ಅಂತರಾಷ್ಟ್ರೀಯ T20 ಚೊಚ್ಚಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಡಿಸೆಂಬರ್ 2019 ರಲ್ಲಿ ಕಾನ್ಪುರದಲ್ಲಿ ನಡೆದ ಪಂದ್ಯಾವಳಿಯಲ್ಲಿ ಸಹ ಉತ್ತಮ ಪ್ರದರ್ಶನ ನೀಡಿದ ಲೋಕೇಶ್ ಇದೀಗ ಡಿಸೆಂಬರ್ ನಲ್ಲಿ ನಡೆಯುವ ಟಿ20 ಪಂದ್ಯಾವಳಿಯಲ್ಲಿ ಆಯ್ಕೆಯಾಗಿದ್ದಾರೆ.
ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ ಇನ್ ಇಂಡಿಯಾ ಸಂಸ್ಥೆ 56 ಕ್ರಿಕೆಟ್ ಪಟುಗಳ ಆಯ್ಕೆ ಮಾಡಿಕೊಂಡು, ಭೋಪಾಲ್ ನಲ್ಲಿ ತರಬೇತಿ ನೀಡಿದ್ದು ಆ ಪೈಕಿ 17 ಕ್ರೀಡಾ ಪಟುಗಳನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ ಲೋಕೇಶ್ ಕೂಡ ಒಬ್ಬರು. ಕರ್ನಾಟಕದ ಈ ಯುವಕನ ಕ್ರಿಕೆಟ್ ಜರ್ನಿಗೆ ಶುಭವಾಗಲಿ ಎಂಬುದೇ ಎಲ್ಲರ ಹಾರೈಕೆ.