ಮುಂಬೈ: ಜನವರಿ 05ರಂದು ಮುಕ್ತಾಯಗೊಂಡ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದ ಟೀಮ್ ಇಂಡಿಯಾದ ಸ್ಟಾರ್ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಬೆನ್ನು ನೋವಿನ ಕಾರಣ ಪಂದ್ಯದ ಮಧ್ಯದಲ್ಲೇ ಮೈದಾನದಿಂದ ಹೊರ ನಡೆದಿದ್ದರು. ಸರಣಿ ಮುಗಿದ ಬೆನ್ನಲ್ಲೇ ಜಸ್ಪ್ರೀತ್ ಬುಮ್ರಾ ಆರೋಗ್ಯದ ಕುರಿತಂತೆ ಒಂದೊಂದೆ ಮಾಹಿತಿ ಹೊರಬೀಳುತ್ತಿದ್ದು, ಚಾಂಪಿಉಯನ್ಸ್ ಟ್ರೋಫಿಯಲ್ಲಿ ಇದು ತಂಡದ ಮೇಲೆ ಪರಿಣಾಮ ಬೀಳಬಹುದು ಎಂದು ಹೇಳಲಾಗಿದೆ.
ಫೆಬ್ರವರಿ 19ರಿಂದ ಮಾರ್ಚ್ 09ರವರೆಗೆ ಪಾಕಿಸ್ತಾನ ಹಾಗೂ ದುಬೈ (ಭಾರತದ ಪಂದ್ಯಗಳು ಮಾತ್ರ) ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಈಗಾಗಲೇ ತಂಡಗಳು ತಯಾರಿ ಆರಂಭಿಸಿದ್ದು, ಬಿಸಿಸಿಐ ಇನ್ನಷ್ಟೇ ತಂಡವನ್ನು ಪ್ರಕಟಿಸಬೇಕಿದೆ. ಆದರೆ, ಭಾರತದ ತಂಡದ ವಿಚಾರಕ್ಕೆ ಬರುವುದಾದರೆ ಜಸ್ಪ್ರೀತ್ ಬುಮ್ರಾ (Jasprit Bumrah) ಇಂಗ್ಲೆಂಡ್ ವಿರುದ್ಧದ ಸರಣಿ ಹಾಗೂ ಚಾಂಪಿಯನ್ಸ್ ಟ್ರೋಪಿಯನ್ನು ತಪ್ಪಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದ್ದು, ಈ ವಿಚಾರ ಭಾರತದ ಚಿಂತೆಯನ್ನು ಹೆಚ್ಚಿಸಿದೆ.
ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಜಸ್ಪ್ರೀತ್ ಬುಮ್ರಾ (Jasprit Bumrah) ಚಾಂಪಿಯನ್ಸ್ ಟ್ರೋಫಿಯ ಮೊದಲ ಸುತ್ತಿನ ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ಧಾರೆ ಎಂದು ಹೇಳಲಾಗಿದ್ದು, ಈ ವಿಚಾರ ಟೀಮ್ ಮ್ಯಾನೇಜ್ಮೆಂಟ್ಅನ್ನು ಚಿಂತೆಗೆ ದೂಡಿದೆ. ವೈದ್ಯರು ಬುಮ್ರಾಗೆ ರೆಸ್ಟ್ ಮಾಡುವಂತೆ ಸೂಚಿಸಿದ್ದು, ಮೊದಲ ಸುತ್ತಿನ ಕಾದಾಟದಲ್ಲಿ ಅವರ ಅನುಪಸ್ಥಿತಿ ಟೀಮ್ ಇಂಡಿಯಾವನ್ನು ಕಾಡಲಿದೆ. ಮಾರ್ಚ್ ಮೊದಲ ವಾರಕ್ಕೆ ಬುಮ್ರಾ ಫಿಟ್ ಆಗಲಿದ್ಧಾರೆ ಎಂದು ಹೇಳಲಾಗಿದ್ದು, ನಾಕವಟ್ ಹಂತದ ಪಂದ್ಯಗಳಿಗೆ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಅದರಂತೆ ಬುಮ್ರಾ ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ವಿರುದ್ಧದ ಪಂದ್ಯಗಳಿಗೆ ಅಲಭ್ಯರಾಗಿದ್ದು, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ಮಾತ್ರ ಜಸ್ಪ್ರೀತ್ ಬುಮ್ರಾ ಲಭ್ಯರಿರುವ ಸಾಧ್ಯತೆ ಹೆಚ್ಚಿದೆ.
ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಬೆನ್ನಿನ ಸ್ನಾಯು ಸೆಳೆತದ ಸಮಸ್ಯೆಯಿಂದ ಬಳಲುತ್ತಿರುವ ಬುಮ್ರಾ (Jasprit Bumrah) ಸದ್ಯ ಚಿಕಿತ್ಸೆಗೆ ಒಳಗಾಗಿದ್ದು, ಸುಧಾರಿಸಿಕೊಂಡು ಫಿಟ್ನೆಸ್ ಸಾಬೀತುಪಡಿಸಲು ಮೂರು ವಾರಗಳ ಸಮಯವಕಾಶ ಬೇಕೆಂದು ಹೇಳಲಾಗಿದೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಬುಮ್ರಾಗೆ ರೆಸ್ಟ್ ನೀಡಲಾಗುತ್ತದೆ ಎಂದು ಹೇಳಲಾಗಿದ್ದು, ಆ ಬಳಿಕ ವೈದ್ಯರು ತಪಾಸಣೆಗೆ ಒಳಪಡಿಸಲಿದ್ದಾರೆ. ಈ ಅವಧಿಯಲ್ಲಿ ಬುಮ್ರಾ ತಮ್ಮ ಫಿಟ್ನೆಸ್ಅನ್ನು ಸಾಬೀತುಪಡಿಸಿದರೆ ಅವರು ತಂಡಕ್ಕೆ ವಾಪಸ್ ಆಗಲಿದ್ದಾರೆ. ಇಲ್ಲವಾದಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತಕ್ಕೆ ದೊಡ್ಡ ಹಿನ್ನಡೆಯಾಗಲಿದೆ.