ಬೆಂಗಳೂರು: ಕ್ರಿಕೆಟ್ ಜಗತ್ತಿನಲ್ಲಿ ಶುಕ್ರವಾರ ಐವರು ಕ್ರಿಕೆಟಿಗರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಐವರೂ ಬೌಲಿಂಗ್ ಮಾಡುತ್ತಿದ್ದರು ಎಂಬುದು ಕಾಕತಾಳೀಯ. ಇವರೆಲ್ಲರೂ ಟೆಸ್ಟ್ ಕ್ರಿಕೆಟ್ನಲ್ಲಿ ಒಟ್ಟಾರೆಯಾಗಿ 1090 ವಿಕೆಟ್ ಕಬಳಿಸಿದ್ದಾರೆ ಎಂಬುದು ವಿಶೇಷ! ಹಾಗಾದರೆ ಯಾರವರು ಗೊತ್ತೇ?
ಭಾರತದ ಆಫ್-ಸ್ಪಿನ್ನರ್ ಹರ್ಭಜನ್ ಸಿಂಗ್ (40 ವರ್ಷ), ನ್ಯೂಜಿಲೆಂಡ್ನ ವೇಗದ ಬೌಲಿಂಗ್ ದಿಗ್ಗಜ ರಿಚರ್ಡ್ ಹ್ಯಾಡ್ಲಿ (69 ವರ್ಷ), ಇವನ್ ಚಾಟ್ಫೀಲ್ಡ್ (70 ವರ್ಷ), ಪಾಕಿಸ್ತಾನದ ವಾಸಿಂ ರಾಜಾ (68 ವರ್ಷ) ಮತ್ತು ಜಿಂಬಾಬ್ವೆಯ ವೇಗಿ ಹೆನ್ರಿ ಒಲಾಂಗ (44 ವರ್ಷ) ಶುಕ್ರವಾರ ಬರ್ತ್ಡೇ ಆಚರಿಸುತ್ತಿರುವ ಐವರು ಕ್ರಿಕೆಟಿಗರಾಗಿದ್ದಾರೆ. ಇವರಲ್ಲಿ ಹರ್ಭಜನ್ 417, ರಿಚರ್ಡ್ ಹ್ಯಾಡ್ಲಿ 431, ಚಾಟ್ಫೀಲ್ಡ್ 123, ವಾಸಿಂ ರಾಜಾ 51 ಮತ್ತು ಒಲಾಂಗ 68 ವಿಕೆಟ್ ಕಬಳಿಸಿದ್ದಾರೆ. ಹ್ಯಾಡ್ಲಿ ಮತ್ತು ಚಾಟ್ಫೀಲ್ಡ್ ಸಮಕಾಲೀನ ಬೌಲರ್ಗಳಾಗಿದ್ದು ಮಾತ್ರವಲ್ಲದೆ ನ್ಯೂಜಿಲೆಂಡ್ ತಂಡದ ಪರ ಹೊಸ ಚೆಂಡು ಹಂಚಿಕೊಳ್ಳುತ್ತಿದ್ದರು. ವೀಕ್ಷಕವಿವರಣೆಕಾರರಾಗಿ ಜನಪ್ರಿಯರಾಗಿರುವ ಪಾಕಿಸ್ತಾನದ ಮಾಜಿ ನಾಯಕ ರಮೀಜ್ ರಾಜಾ ಅವರ ಅಣ್ಣನಾಗಿರುವ ವಾಸಿಂ ರಾಜಾ, ತಜ್ಱ ಬ್ಯಾಟ್ಸ್ಮನ್ ಆಗಿದ್ದರೂ, ಬೌಲಿಂಗ್ನಲ್ಲೂ ಸಾಕಷ್ಟು ಮಿಂಚಿದ್ದರು. ವಾಸಿಂ ರಾಜಾ 2006ರಲ್ಲೇ ನಿಧನ ಹೊಂದಿದ್ದರು.
ಈ ಐವರು ಬೌಲರ್ಗಳು ಟೆಸ್ಟ್ ಕ್ರಿಕೆಟ್ನಲ್ಲಿ ಒಟ್ಟಾರೆ 319 ಪಂದ್ಯಗಳಲ್ಲಿ 11,574 ಓವರ್ ಬೌಲಿಂಗ್ ಮಾಡಿದ್ದು, ಈ ಪೈಕಿ 2434 ಮೇಡನ್ಗಳು. 31,553 ರನ್ ಬಿಟ್ಟುಕೊಟ್ಟಿದ್ದು, 28.95ರ ಸರಾಸರಿಯಲ್ಲಿ ವಿಕೆಟ್ ಕಬಳಿಸಿದ್ದಾರೆ. 66 ಬಾರಿ 5 ವಿಕೆಟ್ ಗೊಂಚಲು ಪಡೆದಿದ್ದಾರೆ ಮತ್ತು 15 ಪಂದ್ಯಗಳಲ್ಲಿ 10 ವಿಕೆಟ್ ಗೊಂಚಲು ಗಳಿಸಿದ್ದಾರೆ. ಈ ಪೈಕಿ ಹರ್ಭಜನ್ ಸಿಂಗ್ ಮಾತ್ರ ಹ್ಯಾಟ್ರಿಕ್ ವಿಕೆಟ್ ಸಾಧಕರಾಗಿದ್ದಾರೆ. ಒಟ್ಟಾರೆಯಾಗಿ 118 ಕ್ಯಾಚ್ ಕೂಡ ಪಡೆದಿದ್ದು, 8 ಶತಕಗಳ ಸಹಿತ 8,534 ರನ್ ಕೂಡ ಗಳಿಸಿದ್ದಾರೆ ಎಂದು ಜನಪ್ರಿಯ ಕ್ರಿಕೆಟ್ ಅಂಕಿ-ಅಂಶ ತಜ್ಱ ಮೋಹನ್ದಾಸ್ ಮೆನನ್ ಮಾಹಿತಿ ಹಂಚಿಕೊಂಡಿದ್ದಾರೆ.