ಕ್ರೀಡೆ

PHOTO | ಬೆಂಗಳೂರಿನ ಬಿಲಿಯರ್ಡ್ಸ್ ತಾರೆ ಪಂಕಜ್ ಆಡ್ವಾಣಿ ವಿವಾಹ

ಬೆಂಗಳೂರು: ಕ್ಯೂ ಕ್ರೀಡೆಯಲ್ಲಿ 23 ಬಾರಿ ವಿಶ್ವ ಚಾಂಪಿಯನ್ ಪಟ್ಟವೇರಿರುವ ಬೆಂಗಳೂರಿನ ಬಿಲಿಯರ್ಡ್ಸ್-ಸ್ನೂಕರ್ ತಾರೆ ಪಂಕಜ್ ಆಡ್ವಾಣಿ ಸೆಲೆಬ್ರಿಟಿ ಸ್ಟೈಲಿಸ್ಟ್ ಸಾನಿಯಾ ಶದಾದ್‌ಪುರಿ ಅವರನ್ನು ಬುಧವಾರ ಮುಂಬೈನಲ್ಲಿ ವರಿಸಿದ್ದಾರೆ.

‘2021ರ ಜನವರಿ 6 ನಮ್ಮ ವಿವಾಹ ಸಂಬಂಧದ ಜನ್ಮದಿನಾಂಕ’ ಎಂದು 35 ವರ್ಷದ ಪಂಕಜ್ ಆಡ್ವಾಣಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಮುಂಬೈನ ಗುರುದ್ವಾರದಲ್ಲಿ ಸಿಂಧಿ ಸಂಪ್ರದಾಯದ ಅನ್ವಯ ವಿವಾಹ ಸಮಾರಂಭ ನಡೆದಿದ್ದು, ಉಭಯ ಕುಟುಂಬದ ಆಪ್ತರು ಮಾತ್ರ ಭಾಗವಹಿಸಿದ್ದರು.

ಸ್ನೂಕರ್-ಬಿಲಿಯರ್ಡ್ಸ್ ಎರಡೂ ಕ್ಯೂ ಆಟಗಳಲ್ಲಿ ನಿಪುಣರಾಗಿರುವ ಬೆಂಗಳೂರಿನ ಪಂಕಜ್ ಆಡ್ವಾಣಿ, ಅತ್ಯಧಿಕ ವಿಶ್ವ ಕಿರೀಟಗಳನ್ನು ಗೆದ್ದ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಖೇಲ್‌ರತ್ನ, ಅರ್ಜುನ, ಪದ್ಮಶ್ರೀ, ಪದ್ಮಭೂಷಣ ಮತ್ತಿತರ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳಿಂದಲೂ ಪುರಸ್ಕೃತರಾಗಿದ್ದಾರೆ.

ಸಾನಿಯಾ ಶದಾದ್‌ಪುರಿ ಸೆಲೆಬ್ರಿಟಿಗಳಿಗೆ ಮೇಕ್‌ಅಪ್ ಮಾಡುವುದರಲ್ಲಿ ಜನಪ್ರಿಯರಾಗಿದ್ದು, ತಾಪ್ಸಿ ಪನ್ನು, ದಿಯಾ ಮಿರ್ಜಾ, ಬಿಪಾಶ ಬಸು ಮುಂತಾದ ಬಾಲಿವುಡ್ ತಾರೆಯರಿಗೂ ಇವರು ಮೇಕ್‌ಅಪ್ ಮಾಡಿದ್ದಾರೆ. ಅಲ್ಲದೆ ತಮ್ಮ ವಿವಾಹದ ಮೇಕ್‌ಅಪ್ ಮತ್ತು ಡಿಸೈನ್ ಅನ್ನು ಅವರೇ ಮಾಡಿದ್ದಾರೆ.