ಸಿಡ್ನಿ: ಬಿಗ್ ಬ್ಯಾಷ್ ಲೀಗ್ನಲ್ಲಿ ಓರ್ವ ಬ್ಯಾಟ್ಸ್ಮನ್ ಒಂದೇ ಸಮಯದಲ್ಲಿ ಎರಡು ಬಾರಿ ಔಟಾದ ಅಪರೂಪದ ಘಟನೆ ಜರುಗಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಡಿಲೇಡ್ ಸ್ಟ್ರೈಕರ್ಸ್ ತಂಡದ ಆರಂಭಿಕ ಆಟಗಾರ ಜೇಕ್ ವೆದರಾಲ್ಡ್, ಭಾನುವಾರ ಸಿಡ್ನಿ ಥಂಡರ್ ವಿರುದ್ಧ ನಡೆದ ಪಂದ್ಯದಲ್ಲಿ ಕ್ರೀಸ್ನ ಎರಡು ತುದಿಗಳಲ್ಲಿ ಔಟಾಗುವ ಮೂಲಕ ವಿನೂತನವಾಗಿ ವಿಕೆಟ್ ಒಪ್ಪಿಸಿದ ಪ್ರಸಂಗಕ್ಕೆ ಸಾಕ್ಷಿಯಾದರು.
ಮೊದಲನೇ ಇನ್ನಿಂಗ್ಸ್ನ 10ನೇ ಓವರ್ನಲ್ಲಿ ಫಿಲಿಪ್ ಸಾಲ್ಟ್ ಬಾರಿಸಿದ ಚೆಂಡು ಬೌಲರ್ ಕ್ರಿಸ್ ಗ್ರೀನ್ನತ್ತ ಧಾವಿಸಿ ಬಂದಿತು. ಗ್ರೀನ್ ಅವರ ಎಡಗೈಗೆ ಚೆಂಡು ತಾಗಿ ಸ್ಟಂಪ್ಗೆ ಬಡಿಯಿತು. ಅಷ್ಟರಲ್ಲಾಗಲೇ ಕ್ರೀಸ್ ಬಿಟ್ಟಿದ್ದ ವೆದರಾಲ್ಡ್ ಮತ್ತೆ ಬ್ಯಾಟ್ ಹಿಂದಕ್ಕೆ ಇಡುವಷ್ಟರಲ್ಲಿ ವಿಕೆಟ್ಗೆ ತಾಗಿದ ಚೆಂಡು ಕೊಂಚ ದೂರ ಸಾಗಿತು. ಇತ್ತ ಫಿಲಿಪ್ ಸಾಲ್ಟ್ ಅವರು ಸಿಂಗಲ್ ರನ್ ಕದಿಯಲು ಮುಂದಾದಾಗ ವೆದರಾಲ್ಡ್ ಸಹ ಸ್ಟ್ರೈಕರ್ ವಿಭಾಗಕ್ಕೆ ಓಡಿದರು. ಅಷ್ಟರಲ್ಲಿ ಕ್ಷೇತ್ರರಕ್ಷಕ ಎಸೆದ ಚೆಂಡನ್ನು ವಿಕೆಟ್ ಕೀಪರ್ ಸ್ಯಾಮ್ ಬಿಲ್ಲಿಂಗ್ಸ್ ಹಿಡಿದುಕೊಂಡು ವೆದರಾಲ್ಡ್ ಕ್ರೀಸ್ಗೆ ಬರುವ ಮುನ್ನವೇ ವಿಕೆಟ್ ಉರುಳಿಸಿದರು.
ವೆದರಾಲ್ಡ್ ಎರಡು ಬಾರಿ ಔಟಾದರೂ ಕೂಡ ಮೊದಲ ನಾನ್ ಸ್ಟ್ರೈಕರ್ ವಿಭಾಗದ ವಿಕೆಟ್ ಅನ್ನು ಔಟ್ ಎಂದು ನಿರ್ಣಯಿಸಲಾಯಿತು. ಇದಕ್ಕೂ ಮುನ್ನ ವಿಕೆಟ್ ರಿವ್ಯೂವ್ ಗಮನಿಸಿದ ಥರ್ಡ್ ಅಂಪೈರ್, ಚೆಂಡು ವಿಕೆಟ್ಗೆ ತಾಗುವ ಮುನ್ನ ನಾನ್ ಸ್ಟ್ರೈಕರ್ ವಿಭಾಗದಲ್ಲಿ ವೆದರಾಲ್ಡ್ ಬ್ಯಾಟ್ ಗಾಳಿಯಲ್ಲಿರುವುದನ್ನು ಪರಿಗಣಿಸಿ ಔಟ್ ಎಂದು ನಿರ್ಣಯಿಸಿದರು.
ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಇಂದು (ಜ.24) ಬೆಳಗ್ಗೆ 11:48ಕ್ಕೆ ಕೆಎಫ್ಸಿ ಬಿಗ್ ಬ್ಯಾಷ್ ಲೀಗ್ (KFC Big Bash League) ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದು ಕೆಲವೇ ಗಂಟೆಗಳಲ್ಲಿ 65 ಸಾವಿರಕ್ಕೂ ಹೆಚ್ಚು ವೀಕ್ಷಣೆ ಕಂಡಿದ್ದು, ವೈರಲ್ ಆಗುತ್ತಿದೆ.
ಪಂದ್ಯದ ಫಲಿತಾಂಶಕ್ಕೆ ಬರುವುದಾದರೆ, ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 159 ರನ್ ಕಲೆಹಾಕಿದ್ದ ಅಡಿಲೇಡ್ ಸ್ಟ್ರೈಕರ್ಸ್ ತಂಡ ಎದುರಾಳಿ ಸಿಡ್ನಿ ಥಂಡರ್ಸ್ (20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 153 ರನ್) ವಿರುದ್ಧ 6 ರನ್ಗಳ ಜಯ ಸಾಧಿಸಿದೆ. (ಏಜೆನ್ಸೀಸ್)