ಕ್ರೀಡೆ

ಕೇರಳ ಬ್ಲಾಸ್ಟರ್ಸ್‌ ಎದುರು ಭರ್ಜರಿ ಜಯ ದಾಖಲಿಸಿದ ಬಿಎಫ್ ಸಿ

raghukittur

ಫರ್ಟೊಡ (ಗೋವಾ) : ದ್ವಿತೀಯಾರ್ಧದಲ್ಲಿ ಭರ್ಜರಿ ನಿರ್ವಹಣೆ ತೋರಿದ ಬೆಂಗಳೂರು ಎಫ್ ಸಿ ತಂಡ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಗೆಲುವಿನ ಹಳಿಗೇರಲು ಯಶಸ್ವಿಯಾಯಿತು. ಫರ್ಟೊಡ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಬಿಎಫ್ ಸಿ 4-2 ಗೋಲುಗಳಿಂದ ಕೇರಳ ಬ್ಲಾಸ್ಟರ್ಸ್‌ ಎಫ್ ಸಿ ತಂಡವನ್ನು ಸೋಲಿಸಿತು. ಇದರೊಂದಿಗೆ ಬಿಎಫ್ ಸಿ ಲೀಗ್‌ನಲ್ಲಿ ಆಡಿದ 5 ಪಂದ್ಯಗಳಿಂದ 2ನೇ ಗೆಲುವು ದಾಖಲಿಸಿತು. ಆರಂಭಿಕ ಹಿನ್ನಡೆ ನಡುವೆಯೂ ಸಂಘಟಿತ ನಿರ್ವಹಣೆ ಮೂಲಕ ಬಿಎಫ್ ಸಿ ಆಟಗಾರರು ತಿರುಗೇಟು ನೀಡಲು ಯಶಸ್ವಿಯಾದರು.

ಕೇರಳ ಪರ ರಾಹುಲ್ ಪ್ರವೀಣ್ (17ನೇ ನಿಮಿಷ) ಗೋಲು ದಾಖಲಿಸಿದ ಬಿಎಫ್ ಸಿ ಆರಂಭಿಕ ಶಾಕ್ ನೀಡಿದರು. ಪ್ರತಿಯಾಗಿ ಕ್ಲೀಟೊನ್ ಸಿಲ್ವಾ (29) ಗೋಲು ಬಾರಿಸಿದ ಫಲವಾಗಿ ಪಂದ್ಯ ಮೊದಲಾರ್ಧದಲ್ಲಿ ತಲಾ 1 ಗೋಲುಗಳಿಂದ ಸಮಬಲ ಸಾಧಿಸಿತು. ಬಳಿಕ ದ್ವಿತೀಯಾರ್ಧದಲ್ಲಿ ಪಂದ್ಯದಲ್ಲಿ ಹಿಡಿತ ಸಾಧಿಸಲು ಯಶಸ್ವಿಯಾಯಿತು. ಕ್ರಿಸ್ಟಿಯನ್ ಒಪ್ಸೆತ್ (51) ಹಾಗೂ ಡಿಮಾಸ್ ಡೆಲ್ಗಾಡೊ (53) ಕೇವಲ ಮೂರು ನಿಮಿಷಗಳ ಅಂತರದಲ್ಲಿ 2 ಗೋಲು ದಾಖಲಿಸಿ ಪಂದ್ಯದಲ್ಲಿ ಬಿಎಫ್ ಸಿ 3-1 ರಿಂದ ಮುನ್ನಡೆ ಸಾಧಿಸಲು ನೆರವಾದರು. ಇದರೊಂದಿಗೆ ಪಂದ್ಯದಲ್ಲಿ ಬಿಎಫ್ ಸಿ ಬಿಗಿ ಹಿಡಿತ ಸಾಧಿಸಿತು. ಕೇರಳ ಪರ ವಿನ್ಸೆಂಟ್ ಗೊಮೆಜ್ (61) ಗೋಲು ಗಳಿಸಿ ಪ್ರತಿಹೋರಾಟದ ಎಚ್ಚರಿಕೆ ನೀಡಿದರೂ ನಾಯಕ ಸುನೀಲ್ ಛೇಟ್ರಿ (65) ಮತ್ತೊಂದು ಗೋಲು ದಾಖಲಿಸಿ ಪಂದ್ಯದಲ್ಲಿ ಹಿಡಿತ ಸಾಧಿಸಲು ನೆರವಾದರು. ಕಡೇ 35 ನಿಮಿಷಗಳ ಕಾಲ ಬಿಎಫ್ ಸಿ ಯಾವುದೇ ಅಪಾಯವಾಗದಂತೆ ಎಚ್ಚರ ವಹಿಸಿ ಗೆಲುವಿನ ನಗೆ ಬೀರಿತು.

ಲೀಗ್‌ನಲ್ಲಿ ಇದುವರೆಗೂ ಆಡಿರುವ 5 ಪಂದ್ಯಗಳಲ್ಲಿ 2ನೇ ಗೆಲುವು ಇದಾಗಿದ್ದು, ಉಳಿದ 3 ಪಂದ್ಯಗಳಲ್ಲಿ ಡ್ರಾ ಸಾಧಿಸಿರುವ 9 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿತು.

ಮುಂದಿನ ಎದುರಾಳಿ: ಒಡಿಶಾ ಎಫ್ ಸಿ, ಯಾವಾಗ: ಗುರುವಾರ (ಡಿ.17).