ಕ್ರೀಡೆ

ಆತ ಬೌಲಿಂಗ್​ ಮಾಡಿರದಿದ್ದರೆ ಚೆನ್ನಾಗಿರುತ್ತಿತ್ತು; ಬೆಂಗಳೂರು ಟೆಸ್ಟ್​ನಲ್ಲಿ Team India ಸೋಲಿಗೆ ಪ್ರಮುಖ ಕಾರಣ ಉಲ್ಲೇಖಿಸಿದ ಮಾಜಿ ಕ್ರಿಕೆಟಿಗ

ಮುಂಬೈ: ತವರು ನೆಲದಲ್ಲಿ ತನ್ನ ಪ್ರಾಬಲ್ಯಕ್ಕೆ ಹೆಸರುವಾಸಿಯಾದ ಭಾರತ ತಂಡವು (Team India) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯ (Test Series) ಮೊದಲ ಪಂದ್ಯದಲ್ಲಿ ಸೋಲುವ ಮೂಲಕ ಭಾರೀ ಮುಖಭಂಗವನ್ನು ಅನುಭವಿಸಿತ್ತು. ಸರ್ಫರಾಜ್ ಖಾನ್​​ (Sarfaraz Khan) ಹಾಗೂ ರಿಷಭ್ ಪಂತ್​ (Rishabh Pant) ದಿಟ್ಟ ಪ್ರತಿರೋಧದ ಹೊರತಾಗಿಯೂ ಕೆಳಕ್ರಮಾಂಕದ ಕುಸಿತದಿಂದಾಗಿ ಭಾರತ (Team India) ಸೋಲುಂಡಿದ್ದು, ಈ ಬಗ್ಗೆ ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ಸೋಲಿಗೆ ಕಾರಣವಾದ ಪ್ರಮುಖ ಅಂಶಗಳನ್ನು ಉಲ್ಲೇಖಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಭಾರತದ (Team India) ಸೋಲಿಗೆ ನಾಯಕನ ತಪ್ಪು ನಿರ್ಧಾರವೇ ಪ್ರಮುಖ ಕಾರಣ ಎಂದು ಹೇಳಲಾಗಿದ್ದು, ರೋಹಿತ್​ ಶರ್ಮರ (Rohit Sharma) ಮತ್ತೊಂದು ಎಡವಟ್ಟೇ ಸೋಲಿಗೆ ಪ್ರಮುಖ ಕಾರಣ ಎಂದು ಹೇಳಲಾಗಿದೆ. ಈ ಬಗ್ಗೆ ಮಾಜಿ ಆಟಗಾರ ಆಕಾಶ್​ ಚೋಪ್ರಾ (Aakash Chopra) ಮಾತನಾಡಿದ್ದು, ಹಿಟ್​ಮ್ಯಾನ್​ ನಿರ್ಧಾರವನ್ನು ಪ್ರಶ್ಬಿಸಿದ್ದಾರೆ.

ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಈ ಕುರಿತಾಗಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿರುವ ಆಕಾಶ್​, ಭಾರತ (Team India) ಎದುರಾಳಿಗಳಿಗೆ ನೀಡಿದ ಗುರಿ ಕಡಿಮೆ ಇತ್ತು ಎಂಬುದರಲ್ಲಿ ಯಾವುದೇ ಸಂದೇಹ ಬೇಡ. ನನ್ನ ಪ್ರಕಾರ ನಾಯಕ ರೋಹಿತ್​ ಅಶ್ವಿನ್​ರನ್ನು (Ashwin) ಸ್ವಲ್ಪ ಬೇಗನೆ ಬೌಲ್​ ಮಾಡಲು ಕಳುಹಿಸಬೇಕಿತ್ತು. ಆದರೆ, ನಾಯಕ ರೋಹಿತ್​ರ ಈ ನಿರ್ಧಾರ ನನಗೆ ಅಚ್ಚರಿ ಮೂಡಿಸಿತು.

ಟೆಸ್ಟ್​ ಕ್ರಿಕೆಟ್​ನಲ್ಲಿ (Test Cricket) ಅಶ್ವಿನ್​ ಪ್ರದರ್ಶನ ನೋಡುವುದಾದರೆ ಆತ ಅತಿ ಹೆಚ್ಚು ವಿಕೆಟ್​ಗಳನ್ನು ಪಡೆದಿದ್ದಾನೆ. ಬುಮ್ರಾ (Jasprit Bumrah)ಹಾಗೂ ಸಿರಾಜ್​ (Mohammed Siraj) ಉತ್ತಮವಾಗಿ ದಾಳಿಯನ್ನು ಸಂಘಟಿಸಿದರಾದರು ಅಂತಿಮವಾಗಿ ನೀವು ಅಶ್ವಿನ್​ರನ್ನು ಐದನೇ ಆಯ್ಕೆಯಾಗಿ ಪರಿಗಣಿಸಿದ್ದು, ಸೋಲಿಗೆ ಕಾರಣವಾಯ್ತು ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಗೆಲ್ಲಲು 15-20 ರನ್​ ಬೇಕಿದ್ದಾಗ ಆತನನ್ನು ಬೌಲಿಂಗ್​ ಮಾಡಲು ಕರೆದುಕೊಂಡು ಬಂದರೆ ಏನು ಉಪಯೋಗ. ಟಾಸ್​ ಜೊತೆಗೆ ನಾಯಕನ ಈ ನಿರ್ಧಾರವು ಸೋಲಿಗೆ ಪ್ರಮುಖ ಕಾರಣವಾಯ್ತು ಎಂದು ಟೀಮ್​ ಇಂಡಿಯಾ ಮಾಜಿ ಆಟಗಾರ ಆಕಾಶ್​ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

ಅಕ್ಟೋಬರ್​ 24ರಂದು ಸರಣಿಯ ಎರಡನೇ ಪಂದ್ಯ ಪುಣೆಯಲ್ಲಿ ನಡೆಯಲಿದ್ದು, ಸರಣಿಯ ಅಂತಿಮ ಪಂದ್ಯವು ನವೆಂಬರ್​ 01-05ರವರೆಗೆ ಮುಂಬೈನಲ್ಲಿ ಜರುಗಲಿದೆ. ಬೆಂಗಳೂರಿನಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್​ ತಂಡವು 36 ವರ್ಷಗಳ ಬಳಿಕ ಭಾರತದ ನೆಲದಲ್ಲಿ ಜಯ ದಾಖಲಿಸಿತು. ಉಳಿದ ಪಂದ್ಯಗಳಲ್ಲಿ ಕಮ್​ಬ್ಯಾಕ್​ ಮಾಡಲು ಭಾರತ ತಂಡ (Team India) ಕಠಿಣ ತಯಾರಿ ನಡೆಸುತ್ತಿದೆ.