ಕ್ರೀಡೆ

8 ಪಂದ್ಯಗಳ ಬಳಿಕ ಕೊನೆಗೂ ಗೆಲುವು ಕಂಡ ಬೆಂಗಳೂರು ಎಫ್​ಸಿ

ವಾಸ್ಕೋ: ಮಾಜಿ ಚಾಂಪಿಯನ್ ಬೆಂಗಳೂರು ಎಫ್​ಸಿ ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯಲ್ಲಿ ಸತತ 8 ಪಂದ್ಯಗಳ ಬಳಿಕ ಕೊನೆಗೂ ಗೆಲುವಿನ ನಗೆ ಬೀರಿದೆ. ಎಸ್‌ಸಿ ಈಸ್ಟ್ ಬೆಂಗಾಲ್ ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ ಬೆಂಗಳೂರು ಎಫ್​ಸಿ ತಂಡ 2-0 ಗೋಲುಗಳಿಂದ ಗೆಲುವು ದಾಖಲಿಸಿ ಪ್ಲೇಆಫ್​ ಆಸೆ ಜೀವಂತವಿರಿಸಿಕೊಂಡಿತು. ಸುನೀಲ್ ಛೇಟ್ರಿ ಬಳಗಕ್ಕೆ ಇದು 2021ರ ಮೊದಲ ಗೆಲುವಾಗಿದೆ.

ಕ್ಲಿಟನ್ ಸಿಲ್ವ 12ನೇ ನಿಮಿಷದಲ್ಲಿ ಬಾರಿಸಿದ ಗೋಲಿನಿಂದ ಬಿಎಫ್​ಸಿ ಆರಂಭಿಕ ಮುನ್ನಡೆ ಸಾಧಿಸಿತು. ಮೊದಲಾರ್ಧ ಮುಕ್ತಾಯದ ಹಂತದಲ್ಲಿ ದೇಬ್‌ಜಿತ್ ಮಜುಮ್ದಾರ್ (45ನೇ ನಿಮಿಷ) ಸ್ವಗೋಲಿನ ಎಡವಟ್ಟು ಮಾಡಿಕೊಂಡರು. ಈ ಮೂಲಕ ಬಿಎಫ್​ಸಿ ಮುನ್ನಡೆಯನ್ನು ಹೆಚ್ಚಿಸಿಕೊಂಡಿತು.

ಆಡಿದ 15ನೇ ಪಂದ್ಯದಲ್ಲಿ 4ನೇ ಗೆಲುವು ಒಲಿಸಿಕೊಂಡ ಸುನೀಲ್ ಛೇಟ್ರಿ ಬಳಗ 18 ಅಂಕದೊಂದಿಗೆ (6 ಡ್ರಾ, 5 ಸೋಲು) 6ನೇ ಸ್ಥಾನಕ್ಕೇರಿದೆ. ಬಿಎಫ್​ಸಿ ಕಳೆದ 8 ಪಂದ್ಯಗಳಲ್ಲಿ 5 ಸೋಲು ಕಂಡಿತ್ತು. ಬಿಎಫ್​ಸಿ ಇದೀಗ ಸತತ 12 ಪಂದ್ಯಗಳ ಬಳಿಕ ಎದುರಾಳಿಗೆ ಒಂದೂ ಗೋಲು ಬಿಟ್ಟುಕೊಡಲಿಲ್ಲ. 15ನೇ ಪಂದ್ಯದಲ್ಲಿ 6ನೇ ಸೋಲು ಕಂಡ ಈಸ್ಟ್ ಬೆಂಗಾಲ್ ತಂಡ 10ನೇ ಸ್ಥಾನದಲ್ಲೇ ಉಳಿದಿದ್ದು, ಸೆಮಿಫೈನಲ್‌ಗೇರುವ ಆಸೆಯನ್ನು ಬಹುತೇಕ ಕೈಬಿಟ್ಟಿದೆ.

ಕಾರ್ಲ್ಸ್ ಕೌಡ್ರಾಟ್ ಟೂರ್ನಿಯ ನಡುವೆಯೇ ಪದತ್ಯಾಗ ಮಾಡಿದ ಕಾರಣ, ನೌಶಾದ್ ಮೂಸಾ ಮಧ್ಯಂತರ ಕೋಚ್ ಹೊಣೆ ವಹಿಸಿಕೊಂಡ ಬಳಿಕ ಬಿಎಫ್​ಸಿಗೆ ಇದು ಮೊದಲ ಗೆಲುವಾಗಿದೆ.

ಬಿಎಫ್​ಸಿ ಮುಂದಿನ ಎದುರಾಳಿ: ಚೆನ್ನೈಯಿನ್ ಎಫ್​ಸಿ, ಯಾವಾಗ: ಶುಕ್ರವಾರ.