ಕ್ರೀಡೆ

ಮಹಾರಾಜ ಟ್ರೋಫಿಯಲ್ಲಿ ಫೈನಲ್​ ಪ್ರವೇಶಿಸಿದ ಬೆಂಗಳೂರು ಬ್ಲಾಸ್ಟರ್ಸ್​

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಸಂಟಿತ ಬೌಲಿಂಗ್​ ದಾಳಿ ಮತ್ತು ಆರಂಭಿಕರ ಭರ್ಜರಿ ಜತೆಯಾಟದ ಬಲದಿಂದ ಬೆಂಗಳೂರು ಬ್ಲಾಸ್ಟರ್ಸ್​ ತಂಡ ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಮೊದಲ ಸೆಮಿಫೈನಲ್​ ಪಂದ್ಯದಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್​ ವಿರುದ್ಧ 9 ವಿಕೆಟ್​ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಲೀಗ್​ ಹಂತದ ಅಗ್ರಸ್ಥಾನಿ ಬೆಂಗಳೂರು ಮೊದಲ ತಂಡವಾಗಿ ಫೈನಲ್​ಗೇರಿದೆ. ಮಯಾಂಕ್​ ಅಗರ್ವಾಲ್​ ಪಡೆ ಮೈಸೂರು-ಹುಬ್ಬಳ್ಳಿ ನಡುವಿನ 2ನೇ ಸೆಮೀಸ್​ ವಿಜೇತರ ವಿರುದ್ಧ ಭಾನುವಾರ ಪ್ರಶಸ್ತಿಗಾಗಿ ಸೆಣಸಲಿದೆ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಉಪಾಂತ್ಯ ಹೋರಾಟದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಗುಲ್ಬರ್ಗಾ ತಂಡ 81 ರನ್​ಗಳಿಗೆ 6 ವಿಕೆಟ್​ ಕಳೆದುಕೊಂಡು ಪರದಾಡಿತು. ಬಳಿಕ ಬಾಲಂಗೋಚಿಗಳ ಹೋರಾಟದ ನಡುವೆ ಗುಲ್ಬರ್ಗಾ 19.5 ಓವರ್​ಗಳಲ್ಲಿ 155 ರನ್​ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಎಲ್​ಆರ್​ ಚೇತನ್​ (89*ರನ್​, 51 ಎಸೆತ, 9 ಬೌಂಡರಿ, 4 ಸಿಕ್ಸರ್​) ಮತ್ತು ನಾಯಕ ಮಯಾಂಕ್​ ಅಗರ್ವಾಲ್​ (52 ರನ್​, 37 ಎಸೆತ, 6 ಬೌಂಡರಿ, 1 ಸಿಕ್ಸರ್​) ದಿಟ್ಟ ಜತೆಯಾಟದಿಂದ ಬೆಂಗಳೂರು ತಂಡ 17.1 ಓವರ್​ಗಳಲ್ಲಿ 1 ವಿಕೆಟ್​ಗೆ 159 ರನ್​ ಪೇರಿಸಿ ಜಯಿಸಿತು.

ಕುಸಿದ ಮಿಸ್ಟಿಕ್ಸ್​

ವಿಕೆಟ್​ ಕೀಪರ್​-ಆರಂಭಿಕ ಲವ್ನಿತ್​ ಸಿಸೋಡಿಯಾ (41 ರನ್​, 20 ಎಸೆತ, 5 ಬೌಂಡರಿ 2 ಸಿಕ್ಸರ್​) ನಾಯಕ ದೇವದತ್​ ಪಡಿಕ್ಕಲ್​ (13) ಜತೆಗೂಡಿ ಮೊದಲ ವಿಕೆಟ್​ಗೆ 16 ಎಸೆತಗಳಲ್ಲಿ 33 ರನ್​ ಸಿಡಿಸಿ ಬಿರುಸಿನ ಆರಂಭ ಒದಗಿಸಿದರು. ಆಗ ಯುವ ಸ್ಪಿನ್ನರ್​ ಮೊಹ್ಸಿನ್​ ಖಾನ್​ 3 ಎಸೆತಗಳ ಅಂತರದಲ್ಲಿ ಪಡಿಕ್ಕಲ್​ ಮತ್ತು ಬಿಆರ್​ ಶರತ್​ (6) ವಿಕೆಟ್​ ಕಬಳಿಸಿ ಗುಲ್ಬರ್ಗಾಕ್ಕೆ ಆಘಾತ ನೀಡಿದರು. ನಂತರ ಪವರ್​ಪ್ಲೇ ಮುಕ್ತಾಯಕ್ಕೆ ಮುನ್ನ ಸಿಸೋಡಿಯಾ ಎಡಗೈ ವೇಗಿ ಲವಿಶ್​ ಕೌಶಲ್​ಗೆ ವಿಕೆಟ್​ ನೀಡಿದರು. ನಂತರ ಆರ್​. ಸ್ಮರಣ್​ (10), ಕೆವಿ ಅನೀಶ್​ (7) ಮತ್ತು ವೈಶಾಕ್​ ವಿಜಯ್​ಕುಮಾರ್​ (2) 8 ರನ್​ ಅಂತರದಲ್ಲಿ ಔಟಾಗುವುದರೊಂದಿಗೆ ಗುಲ್ಬರ್ಗಾ ದಿಢೀರ್​ ಕುಸಿತ ಕಂಡಿತು.

ಮೊತ್ತ ಏರಿಸಿದ ದುಬೆ

ಗುಲ್ಬರ್ಗಾ ಸಾಧಾರಣ ಮೊತ್ತಕ್ಕೆ ಕುಸಿಯುವ ಭೀತಿ ಎದುರಾದಾಗ ಪ್ರವಿಣ್​ ದುಬೆ (26*) ಉಪಯುಕ್ತ ಆಟದೊಂದಿಗೆ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಅವರಿಗೆ ಪೃಥ್ವಿರಾಜ್​ ಶೇಖಾವತ್​ (12), ರಿತೀಶ್​ ಭಟ್ಕಳ್​ (17), ಇಂಪ್ಯಾಕ್ಟ್​ ಪ್ಲೇಯರ್​ ವಾಹಿದ್​ ೈಜಾನ್​ ಖಾನ್​ (13) ಉತ್ತಮ ಬೆಂಬಲ ಒದಗಿಸಿದರು.

ಮಳೆಯಿಂದ ವಿಳಂಬ

ಉದ್ಯಾನನಗರಿಯಲ್ಲಿ ಶುಕ್ರವಾರ ಸಂಜೆ ಸುರಿದ ಮಳೆಯಿಂದಾಗಿ ಮೊದಲ ಸೆಮಿಫೈನಲ್​ ಪಂದ್ಯ 20 ನಿಮಿಷ ತಡವಾಗಿ ಆರಂಭಗೊಂಡಿತು. ಮಳೆ ನೀರು ಇಂಗಿಸುವ ಸುಸಜ್ಜಿತ ಸಬ್​ಏರ್​ ಸಿಸ್ಟಮ್​ ಹೊಂದಿರುವ ಚಿನ್ನಸ್ವಾಮಿ ಸ್ಟೇಡಿಯಂ, ಮಳೆ ಸ್ಥಗಿತಗೊಂಡ ಕೆಲವೇ ನಿಮಿಷಗಳಲ್ಲಿ ಆಟಕ್ಕೆ ಸಜ್ಜಾಯಿತು. ಟಾಸ್​ ಪ್ರಕ್ರಿಯೆ ಕೂಡ ನಿಗದಿಗಿಂತ ತಡವಾಗಿ ನಡೆಯಿತು.

ಗುಲ್ಬರ್ಗಾ ಮಿಸ್ಟಿಕ್ಸ್​: 19.5 ಓವರ್​ಗಳಲ್ಲಿ 155 (ಸಿಸೋಡಿಯಾ 41, ಪಡಿಕ್ಕಲ್​ 13, ಬಿಆರ್​ ಶರತ್​ 6, ಆರ್​. ಸ್ಮರಣ್​ 10, ಕೆವಿ ಅನೀಶ್​ 7, ವೈಶಾಕ್​ 2, ಪೃಥ್ವಿರಾಜ್​ 12, ರಿತೇಶ್​ ಭಟ್ಕಳ್​ 17, ಪ್ರವಿಣ್​ ದುಬೆ 26, ೈಜಾನ್​ ಖಾನ್​ 13, ಮೊಹ್ಸಿನ್​ ಖಾನ್​ 25ಕ್ಕೆ 2, ಲವಿಶ್​ 33ಕ್ಕೆ 2, ಕ್ರಾಂತಿ ಕುಮಾರ್​ 22ಕ್ಕೆ 2, ಶುಭಾಂಗ್​ ಹೆಗ್ಡೆ 23ಕ್ಕೆ 2). ಬೆಂಗಳೂರು ಬ್ಲಾಸ್ಟರ್ಸ್​: 17.1 ಓವರ್​ಗಳಲ್ಲಿ 1 ವಿಕೆಟ್​ಗೆ 159 (ಎಲ್​ಆರ್​ ಚೇತನ್​ 89*, ಮಯಾಂಕ್​ 52, ರಿತೇಶ್​ ಭಟ್ಕಳ್​ 20ಕ್ಕೆ 1).