ಕ್ರೀಡೆ

ಇಂದು ಯುವ ನಾಯಕರ ಮುಖಾಮುಖಿ; ರಾಯಲ್ಸ್‌ಗೆ ಕ್ಯಾಪಿಟಲ್ಸ್ ಸವಾಲು

ಮುಂಬೈ: ಈ ಬಾರಿ ಐಪಿಎಲ್‌ನಲ್ಲಿ ಹೊಸದಾಗಿ ನಾಯಕತ್ವ ಜವಾಬ್ದಾರಿ ಹೊತ್ತಿರುವ ಯುವ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್‌ಗಳಾದ ರಿಷಭ್ ಪಂತ್ ಮತ್ತು ಸಂಜು ಸ್ಯಾಮ್ಸನ್ ಮುಖಾಮುಖಿಗೆ ವೇದಿಕೆ ಸಜ್ಜಾಗಿದೆ. ಮೊದಲ ಪಂದ್ಯದಲ್ಲೇ ಉತ್ತಮ ನಾಯಕತ್ವ ಗುಣ ಪ್ರದರ್ಶಿಸಿ ಗೆಲುವು ಕಂಡಿರುವ ರುವ ಪಂತ್ ಸಾರಥ್ಯದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ನಾಯಕನಾಗಿ ಆಡಿದ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿದರೂ ತಂಡಕ್ಕೆ ಗೆಲುವು ತಂದುಕೊಡಲು ಸಲರಾಗದ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡಗಳು ಐಪಿಎಲ್-14ರಲ್ಲಿ ಗುರುವಾರ ಕಾದಾಡಲಿವೆ. ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಡೆಲ್ಲಿ ತಂಡ ಗೆಲುವಿನ ಲಯ ಕಾಯ್ದುಕೊಳ್ಳಲು ಹೋರಾಡಲಿದ್ದರೆ, ರಾಜಸ್ಥಾನ ರಾಯಲ್ಸ್ ತಂಡ ಆಲ್ರೌಂಡರ್ ಬೆನ್ ಸ್ಟೋಕ್ಸ್ ಅಲಭ್ಯತೆಯ ನಡುವೆಯೂ ಗೆಲುವಿನ ಖಾತೆ ತೆರೆಯುವ ಹಂಬಲದಲ್ಲಿದೆ.

ರಾಜಸ್ಥಾನ ರಾಯಲ್ಸ್: ಬೆನ್ ಸ್ಟೋಕ್ಸ್ ಗೈರಿನಲ್ಲಿ ರಾಜಸ್ಥಾನ ತಂಡಕ್ಕೆ ಹಲವು ಸಂಕಟಗಳು ಎದುರಾಗಿವೆ. ತಂಡ ಈಗ ಹೊಸ ಆರಂಭಿಕ ಜೋಡಿಯನ್ನೂ ಕಂಡುಕೊಳ್ಳಬೇಕಾಗಿದೆ. ಜೋಸ್ ಬಟ್ಲರ್ ಆರಂಭಿಕರಾಗಿ ಬಡ್ತಿ ಪಡೆಯಬಹುದು ಅಥವಾ ಯಶಸ್ವಿ ಜೈಸ್ವಾಲ್ ಕಣಕ್ಕಿಳಿಯಬಹುದು. ಸ್ಟೋಕ್ಸ್ ಸ್ಥಾನವನ್ನು ಲಿಯಾಮ್ ಲಿವಿಂಗ್‌ಸ್ಟೋನ್ ಅಥವಾ ಡೇವಿಡ್ ಮಿಲ್ಲರ್ ತುಂಬಬಹುದು.

ಕಳೆದ ಪಂದ್ಯ: ಪಂಜಾಬ್ ಕಿಂಗ್ಸ್ ವಿರುದ್ಧ 4 ರನ್ ಜಯ.

ಡೆಲ್ಲಿ ಕ್ಯಾಪಿಟಲ್ಸ್: ಗೆಲುವಿನ ಕಾಂಬಿನೇಷನ್ ಬದಲಾಗುವ ಸಾಧ್ಯತೆ ತೀರ ಕಡಿಮೆ ಇದೆ. ವೇಗಿ ಆನ್ರಿಚ್ ನೋಕಿಯಾ ಪಾಸಿಟಿವ್ ಆಗಿರುವುದರಿಂದ ಇನ್ನಷ್ಟು ಪಂದ್ಯಗಳಿಂದ ಹೊರಗುಳಿಯಲಿದ್ದು, ಕಗಿಸೊ ರಬಾಡ ಕಣಕ್ಕಿಳಿದರೆ, ಟಾಮ್ ಕರ‌್ರನ್ ಹೊರಗುಳಿಯಲಿದ್ದಾರೆ.

ಕಳೆದ ಪಂದ್ಯ: ಚೆನ್ನೈ ಸೂಪರ್‌ಕಿಂಗ್ಸ್ ವಿರುದ್ಧ 7 ವಿಕೆಟ್ ಜಯ.

ಮುಖಾಮುಖಿ: 22

ಡೆಲ್ಲಿ ಕ್ಯಾಪಿಟಲ್ಸ್: 11

ರಾಜಸ್ಥಾನ ರಾಯಲ್ಸ್: 11

ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಬೆನ್ ಸ್ಟೋಕ್ಸ್ ಐಪಿಎಲ್‌ನಿಂದ ಔಟ್

ಮೊದಲ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಅನುಭವಿಸಿದ ಸೋಲಿನ ಬೆನ್ನಲ್ಲೇ ರಾಜಸ್ಥಾನ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಎಡಗೈ ಬೆರಳು ಮುರಿತದಿಂದಾಗಿ ಐಪಿಎಲ್ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಇಂಗ್ಲೆಂಡ್ ವೇಗಿ ಜ್ರೋಾ ಆರ್ಚರ್ ಗೈರಿನಿಂದ ಸಂಕಷ್ಟದಲ್ಲಿದ್ದ ರಾಜಸ್ಥಾನ ತಂಡಕ್ಕೆ ಇದು ಮತ್ತೊಂದು ದೊಡ್ಡ ಹೊಡೆತವಾಗಿದೆ. ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಕ್ರಿಸ್ ಗೇಲ್ ಕ್ಯಾಚ್ ಹಿಡಿಯುವಾಗ ಸ್ಟೋಕ್ಸ್ ಬೆರಳಿಗೆ ಗಾಯವಾಗಿತ್ತು. ಬಳಿಕ ನಡೆಸಲಾದ ಪರೀಕ್ಷೆಯಲ್ಲಿ ಅವರ ಬೆರಳಿನ ಮೂಳೆ ಮುರಿತವಾಗಿರುವುದು ದೃಢಪಟ್ಟಿದೆ. ಇದರಿಂದ ಸ್ಟೋಕ್ಸ್ ಟೂರ್ನಿಯ ಉಳಿದ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಆದರೆ ತವರಿಗೆ ಮರಳುವ ಮುನ್ನ ಇನ್ನೂ ವಾರ ಕಾಲ ತಂಡದ ಜತೆಗಿರಲಿದ್ದಾರೆ ಎಂದು ರಾಜಸ್ಥಾನ ರಾಯಲ್ಸ್ ್ರಾಂಚೈಸಿ ತಿಳಿಸಿದೆ.

ಆನ್ರಿಚ್ ಕರೊನಾ ಪಾಸಿಟಿವ್

ದಕ್ಷಿಣ ಆಫ್ರಿಕಾದ ವೇಗಿ ಆನ್ರಿಚ್ ನೋಕಿಯಾ ಕರೊನಾ ಪಾಸಿಟಿವ್ ಆಗಿದ್ದಾರೆ. ಇದರಿಂದ ಡೆಲ್ಲಿ ಪರ ಅವರು ಕಣಕ್ಕಿಳಿಯುವುದು ಇನ್ನಷ್ಟು ತಡವಾಗಲಿದೆ. ತವರಿನಲ್ಲಿ ಪಾಕಿಸ್ತಾನ ವಿರುದ್ಧ ಏಕದಿನ ಸರಣಿಯಲ್ಲಿ ಆಡಿ ತಡವಾಗಿ ಐಪಿಎಲ್‌ಗೆ ಆಗಮಿಸಿದ್ದ ನೋಕಿಯಾ, ನೆಗೆಟಿವ್ ವರದಿ ತಂದಿದ್ದರು. ಆದರೆ, ಇದೀಗ ಯಾವುದೇ ಲಕ್ಷಣಗಳಿಲ್ಲದೆಯೂ ಅವರ ವರದಿ ಪಾಸಿಟಿವ್ ಬಂದಿದ್ದು, ಇನ್ನಷ್ಟು ದಿನ ಕ್ವಾರಂಟೈನ್‌ನಲ್ಲಿರಲಿದ್ದಾರೆ. ನೋಕಿಯಾ ಈ ಬಾರಿ ಪಾಸಿಟಿವ್ ಆದ 5ನೇ ಐಪಿಎಲ್ ಆಟಗಾರರಾಗಿದ್ದಾರೆ. ಈ ಮುನ್ನ ನಿತೀಶ್ ರಾಣಾ (ಕೆಕೆಆರ್), ದೇವದತ್ ಪಡಿಕಲ್, ಡೇನಿಯಲ್ ಸ್ಯಾಮ್ಸ್ (ಆರ್‌ಸಿಬಿ) ಮತ್ತು ಡೆಲ್ಲಿ ತಂಡದವರೇ ಆದ ಅಕ್ಷರ್ ಪಟೇಲ್ ಪಾಸಿಟಿವ್ ಆಗಿದ್ದರು. ನೋಕಿಯಾ ಜತೆಗೆ ಭಾರತಕ್ಕೆ ಆಗಮಿಸಿದ್ದ ದಕ್ಷಿಣ ಆಫ್ರಿಕಾದ ಮತ್ತೋರ್ವ ವೇಗಿ ಕಗಿಸೊ ರಬಾಡ ವರದಿ ನೆಗೆಟಿವ್ ಬಂದಿದೆ ಎನ್ನಲಾಗಿದೆ.