ಕ್ರೀಡೆ

ಏಷ್ಯಾಕಪ್​ ವೇಳೆ ಪಾಕಿಸ್ತಾನಕ್ಕೆ ಹೋಗಲಿದ್ದಾರೆ ರೋಜರ್​ ಬಿನ್ನಿ, ರಾಜೀವ್​ ಶುಕ್ಲಾ!

ನವದೆಹಲಿ: ಬಿಸಿಸಿಐ ಅಧ್ಯಕ್ಷ ರೋಜರ್​ ಬಿನ್ನಿ ಮತ್ತು ಉಪಾಧ್ಯಕ್ಷ ರಾಜೀವ್​ ಶುಕ್ಲಾ, ಪಾಕಿಸ್ತಾನ ಕ್ರಿಕೆಟ್​ ಮಂಡಳಿಯ (ಪಿಸಿಬಿ) ಆಹ್ವಾನದ ಮೇರೆಗೆ ಏಷ್ಯಾಕಪ್​ ಟೂರ್ನಿಯ ವೇಳೆ ಲಾಹೋರ್​ಗೆ ಭೇಟಿ ನೀಡಲಿದ್ದಾರೆ. ಸೆಪ್ಟೆಂಬರ್​ 4ರಿಂದ 7ರ ನಡುವೆ ಪಾಕಿಸ್ತಾನಕ್ಕೆ ತೆರಳಲಿರುವ ಅವರಿಬ್ಬರು, ಎರಡು ಪಂದ್ಯಗಳಿಗೆ ಸಾಯಾಗಲಿದ್ದಾರೆ. ಪಿಸಿಬಿ ಆಹ್ವಾನವನ್ನು ಸ್ವೀಕರಿಸಲು ಇವರಿಬ್ಬರು ಬಿಸಿಸಿಐ ಆಡಳಿತ ಮಂಡಳಿಯ ಒಪ್ಪಿಗೆಯನ್ನೂ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಪಾಕಿಸ್ತಾನದಲ್ಲಿ ಏಷ್ಯಾಕಪ್​ನ 4 ಪಂದ್ಯಗಳು ನಡೆಯಲಿವೆ. ಆಗಸ್ಟ್​ 30ರಂದು ಪಾಕಿಸ್ತಾನ&ನೇಪಾಳ ನಡುವಿನ ಪಂದ್ಯದೊಂದಿಗೆ ಮುಲ್ತಾನ್​ನಲ್ಲಿ ಟೂರ್ನಿಗೆ ಚಾಲನೆ ಸಿಗಲಿದೆ. ಸೆಪ್ಟೆಂಬರ್​ 2ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯಲಿರುವ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಬಿನ್ನಿ, ಶುಕ್ಲಾ ಜತೆಗೆ ಬಿಸಿಸಿಐ ಕಾರ್ಯದರ್ಶಿ ಜಯ್​ ಷಾ ಕೂಡ ಹಾಜರಾಗಲಿದ್ದಾರೆ. ಬಳಿಕ ಮೂವರೂ ಭಾರತಕ್ಕೆ ಮರಳಲಿದ್ದು, ನಂತರ ಬಿನ್ನಿ ಮತ್ತು ಶುಕ್ಲಾ ವಾಘಾ ಗಡಿಯ ಮೂಲಕ ಲಾಹೋರ್​ಗೆ ತೆರಳಲಿದ್ದಾರೆ.

ಸೆ. 4ರಂದು ಲಾಹೋರ್​ನ ಗರ್ವರ್​ ಹೌಸ್​ನಲ್ಲಿ ಪಿಸಿಬಿ ಆಯೋಜಿಸಿರುವ ಔತಣ ಕೂಟದಲ್ಲೂ ಇವರಿಬ್ಬರು ಭಾಗವಹಿಸಲಿದ್ದಾರೆ. ಬಳಿಕ ಸೆ. 5ರಂದು ನಡೆಯಲಿರುವ ಅಫ್ಘಾನಿಸ್ತಾನ-ಶ್ರೀಲಂಕಾ ಮತ್ತು ಸೆ. 6ರಂದು ಪಾಕಿಸ್ತಾನ ತಂಡ ಸೂಪರ್​-4 ಹಂತದಲ್ಲಿ ಆಡಲಿರುವ ಮೊದಲ ಪಂದ್ಯವನ್ನು ವೀಕ್ಷಿಸಲಿದ್ದಾರೆ. ಆದರೆ ಈ ವೇಳೆ ಉಭಯ ದೇಶಗಳ ದ್ವಿಪಕ್ಷೀಯ ಕ್ರಿಕೆಟ್​ ಪುನರಾರಂಭದ ಬಗ್ಗೆ ಯಾವುದೇ ಚರ್ಚೆ ನಡೆಯುವುದಿಲ್ಲ ಎಂದೂ ಸ್ಪಷ್ಟಪಡಿಸಲಾಗಿದೆ.