ಕ್ರೀಡೆ

ವಯೋಮಿತಿ ಮೋಸ ಒಪ್ಪಿಕೊಂಡರೆ ಕ್ಷಮೆ, ಇಲ್ಲದಿದ್ದರೆ ಕಠಿಣ ಶಿಕ್ಷೆ; ಬಿಸಿಸಿಐ ಎಚ್ಚರಿಕೆ

ನವದೆಹಲಿ: ನೋಂದಾಯಿತ ಆಟಗಾರರು ವಯೋಮಿತಿ ಮೋಸದ ಬಗ್ಗೆ ಸ್ವತಃ ತಪ್ಪೊಪ್ಪಿ ಕೊಂಡರೆ ಕ್ಷಮಾದಾನ ನೀಡುವುದಾಗಿ ಬಿಸಿಸಿಐ ಸೋಮವಾರ ೋಷಿಸಿದೆ. ಇದಕ್ಕೆ ಬದಲಾಗಿ ಕ್ರಿಕೆಟಿಗರು ಮೋಸವನ್ನು ಮುಚ್ಚಿಟ್ಟು, ಬಳಿಕ ತಾವಾಗಿಯೇ ಸಿಕ್ಕಿಬಿದ್ದರೆ 2 ವರ್ಷಗಳ ನಿಷೇಧ ಶಿಕ್ಷೆ ವಿಧಿಸುವುದಾಗಿಯೂ ಎಚ್ಚರಿಕೆ ನೀಡಿದೆ.

2020-21ರ ಋತುವಿನ ಮಂಡಳಿಯ ಎಲ್ಲ ವಯೋಮಿತಿ ಕ್ರಿಕೆಟ್ ಟೂರ್ನಿಗಳಲ್ಲಿ ಆಡುವ ಆಟಗಾರರಿಗೆ ಈ ಕ್ರಮ ಅನ್ವಯಿಸಲಿದೆ. ಈ ಹಿಂದೆ ಜನ್ಮದಿನಾಂಕವನ್ನು ತಿದ್ದಿದ ಅಥವಾ ನಕಲಿ ದಾಖಲೆಪತ್ರ ಸಲ್ಲಿಸಿದ್ದ ಆಟಗಾರರು ತಾವಾಗಿಯೇ ಬಂದು ತಪ್ಪೊಪ್ಪಿಕೊಂಡರೆ ಅಂಥವರಿಗೆ ಯಾವುದೇ ಶಿಕ್ಷೆ ನೀಡಲಾಗುವುದಿಲ್ಲ ಮತ್ತು ಅವರು ತಮ್ಮ ನಿಜವಾದ ಜನ್ಮದಿನಾಂಕವನ್ನು ಬಹಿರಂಗಪಡಿಸಿದರೆ ಅದರ ಪ್ರಕಾರ ಅವರಿಗೆ ವಯೋಮಿತಿ ಟೂರ್ನಿಗಳಲ್ಲೂ ಆಡಲು ಅವಕಾಶ ನೀಡಲಾಗುವುದು ಎಂದು ಬಿಸಿಸಿಐ ತಿಳಿಸಿದೆ.

ಸೆಪ್ಟೆಂಬರ್ 15ರೊಳಗಾಗಿ ಎಲ್ಲ ಆಟಗಾರರೂ ತಮ್ಮ ನಿಜವಾದ ಜನ್ಮದಿನಾಂಕದ ದಾಖಲೆಯನ್ನು ಬಿಸಿಸಿಐನ ವಯಸ್ಸು ರುಜುವಾತು ವಿಭಾಗಕ್ಕೆ ಪತ್ರ ಅಥವಾ ಇ-ಮೇಲ್ ಮೂಲಕ ಸಲ್ಲಿಸಬೇಕು. ಒಂದು ವೇಳೆ ಆಟಗಾರರು ಈ ವೇಳೆ ತಪ್ಪೊಪ್ಪಿಕೊಳ್ಳದೆ, ಮುಂದೆ ವಯೋಮಿತಿ ಮೋಸದಲ್ಲಿ ಸಿಕ್ಕಿಬಿದ್ದರೆ ಕಠಿಣ ಶಿಕ್ಷೆಗೆ ಗುರಿಯಾಗಲಿದ್ದಾರೆ. ಆಗ ಅವರಿಗೆ 2 ವರ್ಷ ನಿಷೇಧ ಶಿಕ್ಷೆಯ ಜತೆಗೆ ಭವಿಷ್ಯದಲ್ಲಿ ಎಂದೂ ಬಿಸಿಸಿಐ ಮತ್ತು ರಾಜ್ಯ ಕ್ರಿಕೆಟ್ ಸಂಸ್ಥೆಗಳ ಯಾವುದೇ ವಯೋಮಿತಿ ಟೂರ್ನಿಗಳಲ್ಲಿ ಆಡುವ ಅವಕಾಶ ನೀಡಲಾಗುವುದಿಲ್ಲ.

ವಯೋಮಿತಿ ಮೋಸದ ವಿರುದ್ಧ ಕಠಿಣ ಕ್ರಮದ ಅಗತ್ಯವಿದೆ ಎಂದು ಎನ್‌ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್ ಈ ಹಿಂದೆ ಹಲವು ಬಾರಿ ಅಭಿಪ್ರಾಯ ಮಂಡಿಸಿದ್ದರು. ವಯೋಮಿತಿ ಮೋಸದ ಬಗ್ಗೆ ದೂರು ನೀಡಲು ಬಯಸಿದವರಿಗಾಗಿ 24/7 ಸಹಾಯವಾಣಿಯನ್ನೂ ಆರಂಭಿಸಲಾಗಿದೆ.