ಕ್ರೀಡೆ

ಟಿ10 ಕ್ರಿಕೆಟ್​ನಲ್ಲೂ ಐಪಿಎಲ್​ ಮಾದರಿ ಲೀಗ್​ ಆರಂಭಿಸುವ ಚಿಂತನೆಯಲ್ಲಿ ಬಿಸಿಸಿಐ!

ನವದೆಹಲಿ: ಟೆಸ್ಟ್​, ಏಕದಿನ, ಟಿ20 ಆಯಿತು ಇನ್ನು ಟಿ10 ಕ್ರಿಕೆಟ್​ ಶುರುವಾಗುವ ಸೂಚನೆ ಹರಡಿದೆ. ಐಪಿಎಲ್​ ರೀತಿಯಲ್ಲೇ ಮುಂದಿನ ವರ್ಷದ ಸೆಪ್ಟೆಂಬರ್​-ಅಕ್ಟೋಬರ್​ನಲ್ಲಿ ತಲಾ 10 ಓವರ್​ಗಳ ಪಂದ್ಯದ ಟಿ10 ಲೀಗ್​ ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಮಂಡಳಿ ಕಾರ್ಯದರ್ಶಿ ಜಯ್​ ಷಾ ಈ ಪ್ರಸ್ತಾವಿತ ಲೀಗ್​ನ ನೀಲನಕ್ಷೆಯನ್ನು ಸಿದ್ಧಪಡಿಸುತ್ತಿದ್ದಾರೆ ಎನ್ನಲಾಗಿದೆ.

ಈ ಹೊಸ ಲೀಗ್​ಅನ್ನು "ಐಪಿಎಲ್​ 2.0' ಎಂದೂ ಬಣ್ಣಿಸಲಾಗುತ್ತಿದೆ. 2008ರಲ್ಲಿ ಐಪಿಎಲ್​ ಆರಂಭಗೊಂಡ ಬಳಿಕ ಬಿಸಿಸಿಐ ಆದಾಯ ಭಾರಿ ಏರಿಕೆ ಕಂಡಿದೆ. ಟಿ10 ಲೀಗ್​ನಿಂದ ಬಿಸಿಸಿಐ ಇನ್ನಷ್ಟು ಆದಾಯ ಗಳಿಸುವ ನಿರೀಕ್ಷೆ ಇದೆ. ಈಗಾಗಲೆ ಕೆಲ ದೇಶಗಳಲ್ಲಿ ಆರಂಭಗೊಂಡಿರುವ ಟಿ10 ಲೀಗ್​ನ ಯಶಸ್ಸಿನಿಂದ ಸ್ಫೂರ್ತಿ ಪಡೆದು ಬಿಸಿಸಿಐ ಕೂಡ ಇದರತ್ತ ಆಸಕ್ತಿ ತೋರಿದೆ.

ಟಿ10 ಲೀಗ್​ನಲ್ಲಿ ಐಪಿಎಲ್​ ತಂಡಗಳೇ ಕಣಕ್ಕಿಳಿಯದೆ, ಇಲ್ಲಿನ ಫ್ರಾಂಚೈಸಿಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡುವ ಯೋಜನೆಯನ್ನೂ ಬಿಸಿಸಿಐ ಹೊಂದಿದೆ. ಭಾರತ ಮಾತ್ರವಲ್ಲದೆ ವಿದೇಶದಲ್ಲೂ ಟಿ10 ಲೀಗ್​ ಆಯೋಜಿಸುವ ಚಿಂತನೆ ಇದೆ.