ಕ್ರೀಡೆ

ಗೌತಮ್​ ಗಂಭೀರ್​ ಟೀಮ್​ ಇಂಡಿಯಾದ ಗುರು ಪಟ್ಟವೇರುವುದು ಗ್ಯಾರಂಟಿ? ಅಧಿಕೃತ ಪ್ರಕಟಣೆಯೊಂದೇ ಬಾಕಿ!

ನವದೆಹಲಿ: ಕೋಲ್ಕತ ನೈಟ್​ರೈಡರ್ಸ್​ ತಂಡದ ಮೆಂಟರ್​ ಆಗಿ ಐಪಿಎಲ್​ ಟ್ರೋಫಿ ಗೆಲ್ಲಿಸಿಕೊಟ್ಟಿರುವ ಮಾಜಿ ಎಡಗೈ ಆರಂಭಿಕ ಗೌತಮ್​ ಗಂಭೀರ್​, ಟಿ20 ವಿಶ್ವಕಪ್​ ಬಳಿಕ ಟೀಮ್​ ಇಂಡಿಯಾದ ಮುಖ್ಯ ಕೋಚ್​ ಹುದ್ದೆ ಅಲಂಕರಿಸುವುದು ಬಹುತೇಕ ಖಚಿತವೆನಿಸಿದೆ ಎಂದು ವರದಿಯಾಗಿದೆ.

ಐಪಿಎಲ್​ ೈನಲ್​ ಪಂದ್ಯದ ಬಳಿಕ ಬಿಸಿಸಿಐ ಕಾರ್ಯದರ್ಶಿ ಜಯ್​ ಷಾ ಜತೆಗೆ ಗಂಭೀರ್​ ನಡೆಸಿದ ಮಾತುಕತೆಯ ಬಳಿಕ ಈ ಖಚಿತತೆ ಮೂಡಿದೆ. ದೇಶದ ಹಿತಕ್ಕಾಗಿ ಹುದ್ದೆ ಅಲಂಕರಿಸಲು ಗಂಭೀರ್​ ಸಮ್ಮತಿಸಿದ್ದಾರೆ. ಇನ್ನು ಕೆಲ ಔಪಚಾರಿಕತೆಗಳನ್ನು ಪೂರೈಸಿದ ಬಳಿಕ ಅಧಿಕೃತ ಪ್ರಕಟಣೆಯಷ್ಟೇ ಬಾಕಿ ಉಳಿದಿದೆ ಎಂದೂ ವರದಿಯಲ್ಲಿ ವಿವರಿಸಲಾಗಿದೆ.

2007ರ ಟಿ20 ವಿಶ್ವಕಪ್​ ಮತ್ತು 2011ರ ಏಕದಿನ ವಿಶ್ವಕಪ್​ ವಿಜೇತ ತಂಡಗಳ ಪ್ರಮುಖ ಆಟಗಾರ ಮಾತ್ರವಲ್ಲದೆ, ಇವೆರಡೂ ಟೂರ್ನಿಗಳ ೈನಲ್​ ಪಂದ್ಯದಲ್ಲಿ ಭಾರತ ಪರ ಗರಿಷ್ಠ ರನ್​ಸ್ಕೋರರ್​ ಕೂಡ ಆಗಿದ್ದ ಗಂಭೀರ್​, ಟೀಮ್​ ಇಂಡಿಯಾ ಕೋಚ್​ ಆಗಬೇಕಾದರೆ ಕೆಕೆಆರ್​ ತಂಡದ ಮೆಂಟರ್​ ಹುದ್ದೆ ತ್ಯಜಿಸಬೇಕಾಗುತ್ತದೆ. ಇದಕ್ಕಾಗಿ ತಂಡದ ಮಾಲೀಕ ಶಾರುಖ್​ ಖಾನ್​ ಸಮ್ಮತಿಯನ್ನೂ ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಆದರೆ ವರ್ಷದ 10 ತಿಂಗಳ ಕಾಲ ಟೀಮ್​ ಇಂಡಿಯಾದೊಂದಿಗೆ ಪ್ರಯಾಣಿಸುವುದೇ ಅವರಿಗೆ ಇರುವ ಪ್ರಮುಖ ಸವಾಲೆನಿಸಿದೆ.

ಗಂಭೀರ್​ ಭಾರತ ತಂಡದ ನೂತನ ಕೋಚ್​ ಆಗುವುದನ್ನು ಐಪಿಎಲ್​ ಫ್ರಾಂಚೈಸಿಯೊಂದರ ಮಾಲೀಕರು ಮತ್ತು ಬಿಸಿಸಿಐನಲ್ಲಿನ ಆಗುಹೋಗುಗಳ ಬಗ್ಗೆ ಸ್ಪಷ್ಟ ಮಾಹಿತಿ ಹೊಂದಿರುವ ವೀಕ್ಷಕವಿವರಣೆಕಾರರೊಬ್ಬರು ಕೂಡ ಖಚಿತಪಡಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.