ಕ್ರೀಡೆ

ಟೆಸ್ಟ್ ತಂಡಕ್ಕೆ ಇವರಿಬ್ಬರೇ ನಾಯಕ, ಉಪನಾಯಕ! ರೋಹಿತ್ ಸ್ಥಾನಕ್ಕೆ ಈತನೇ ಫಿಕ್ಸ್​; ಹೀಗಿದೆ BCCI ಲೆಕ್ಕಾಚಾರ

BCCI: ಇತ್ತೀಚೆಗಷ್ಟೇ ಐಪಿಎಲ್ 18ನೇ ಆವೃತ್ತಿಯ ಮಧ್ಯೆಯೇ ಅಂತಾರಾಷ್ಟ್ರೀಯ ಟೆಸ್ಟ್​ ಫಾರ್ಮೆಟ್​ಗೆ ನಿವೃತ್ತಿ ಘೋಷಿಸಿದ ರೋಹಿತ್ ಶರ್ಮ, ಟೆಸ್ಟ್​ ಕ್ಯಾಪ್ಟನ್ಸಿ ತೊರೆಯುವುದರ ಮೂಲಕ ಬಿಸಿಸಿಐ ಹಾಗೂ ಕ್ರಿಕೆಟ್ ಅಭಿಮಾನಿಗಳಿಗೆ ಆಘಾತ ನೀಡಿದರು. ಈ ಸುದ್ದಿ ತಿಳಿದ ಬಿಸಿಸಿಐ ಮುಂದಿನ ಟೆಸ್ಟ್​ ಕ್ಯಾಪ್ಟನ್ ಯಾರು? ಯಾರನ್ನು ತಂಡದ ನಾಯಕ ಹಾಗೂ ಉಪನಾಯಕನ ಸ್ಥಾನಕ್ಕೆ ತರುವುದು ಎಂಬ ಲೆಕ್ಕಾಚಾರವನ್ನು ಇದೀಗ ಅಂತಿಮಗೊಳಿಸಿದೆ.

ಹಿಟ್​ಮ್ಯಾನ್ ರೋಹಿತ್ ಟೆಸ್ಟ್​​ನಿಂದ ನಿವೃತ್ತಿ ಪಡೆಯುತ್ತಿದ್ದಂತೆ ಮುಂದಿನ ಟೆಸ್ಟ್ ಕ್ಯಾಪ್ಟನ್ ಯಾರು ಎಂಬ ಪ್ರಶ್ನೆ ವ್ಯಾಪಕ ಚರ್ಚೆಗೆ ಗುರಿಯಾಗಿತ್ತು. ಈ ಸಾಲಿನಲ್ಲಿ ಶುಭಮನ್ ಗಿಲ್​, ಕೆ.ಎಲ್. ರಾಹುಲ್, ರಿಷಭ್ ಪಂತ್ ಮತ್ತು ಜಸ್ಪ್ರಿತ್ ಬುಮ್ರಾ ಹೆಸರು ಮುನ್ನೆಲೆಗೆ ಬಂದಿತು. ಇದೇ ಜೂನ್​ 20ರಿಂದ ನಡೆಯಲಿರುವ ಇಂಗ್ಲೆಂಡ್​ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ ಆಡಲಿದೆ. ಈ ತಿಂಗಳ ಅಂತ್ಯದ ವೇಳೆಗೆ ಇಂಗ್ಲೆಂಡ್ ಸರಣಿಗೆ ತಂಡ ಪ್ರಕಟ ಮತ್ತು ನಾಯಕನನ್ನು ಘೋಷಿಸುವ ಸಾಧ್ಯತೆಯಿದೆ ಎಂದು ವರದಿಗಳು ಉಲ್ಲೇಖಿಸಿವೆ.

ವರದಿಗಳ ಪ್ರಕಾರ, ಬಿಸಿಸಿಐ ಈಗಾಗಲೇ ಭಾರತ ಟೆಸ್ಟ್ ತಂಡದ ನಾಯಕನನ್ನು ನಿರ್ಧರಿಸಿದ್ದು, ರೋಹಿತ್ ಶರ್ಮ ಸ್ಥಾನಕ್ಕೆ ಸ್ಟಾರ್ ಬ್ಯಾಟರ್​ ಶುಭಮನ್ ಗಿಲ್​ರನ್ನು ಆಡಿಸಲು ನಿರ್ಧರಿಸಿದೆ. ಈ ಬಾರಿಯ ಟೆಸ್ಟ್ ತಂಡದಲ್ಲಿ ಯುವ ಆಟಗಾರರೇ ಹೆಚ್ಚಾಗಿ ಇರಲಿದ್ದು, ವೇಗಿ ಜಸ್ಪ್ರೀತ್ ಬುಮ್ರಾ ಉಪನಾಯಕನಾಗಿ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗಿದೆ. ಅಸಲಿಗೆ ಬಿಸಿಸಿಐ ಬುಮ್ರಾಗೆ ನಾಯಕತ್ವ ನೀಡುವ ಉದ್ದೇಶ ಹೊಂದಿತ್ತು. ಆದ್ರೆ, ಪದೇ ಪದೇ ಇಂಜುರಿ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ಅವರಿಗೆ ಉಪನಾಯಕ ಸೂಕ್ತ ಎಂದು ನಿರ್ಧರಿಸಲಾಗಿದೆ.

ಇಂಗ್ಲೆಂಡ್ ಪ್ರವಾಸಕ್ಕೆ ಟೀಮ್ ಇಂಡಿಯಾ ನಾಯಕ, ಉಪನಾಯಕ ಮತ್ತು ತಂಡದ ಆಯ್ಕೆಯ ಬಗ್ಗೆ ವಿವರಗಳನ್ನು ಬಹಿರಂಗಪಡಿಸಲು ಮೇ.23 ರಂದು ಪತ್ರಿಕಾಗೋಷ್ಠಿ ನಡೆಸುವ ಸಾಧ್ಯತೆಯಿದೆ. ಮೊದಲ ಟೆಸ್ಟ್ ಪಂದ್ಯ ಜೂನ್ 20ರಿಂದ 24ರವರೆಗೆ ಹೆಡ್ಲಿಂಗ್ಲಿಯಲ್ಲಿ ನಡೆಯಲಿದ್ದು, ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯ ವೇಳಾಪಟ್ಟಿ ಈ ಕೆಳಕಂಡಂತಿದೆ.

1. ಮೊದಲ ಟೆಸ್ಟ್ - ಜೂನ್ 20ರಿಂದ 24, 2025: ಹೆಡಿಂಗ್ಲೆ, ಲೀಡ್ಸ್

2. ಎರಡನೇ ಟೆಸ್ಟ್ - ಜುಲೈ 2ರಿಂದ 6, 2025 : ಎಡ್ಜ್‌ಬಾಸ್ಟನ್, ಬರ್ಮಿಂಗ್ಹ್ಯಾಮ್

3. ಮೂರನೇ ಟೆಸ್ಟ್ - ಜುಲೈ 10ರಿಂದ 14, 2025 : ಲಾರ್ಡ್ಸ್, ಲಂಡನ್

4. ನಾಲ್ಕನೇ ಟೆಸ್ಟ್ - ಜುಲೈ 23ರಿಂದ 27, 2025 : ಓಲ್ಡ್ ಟ್ರಾಫರ್ಡ್, ಮ್ಯಾಂಚೆಸ್ಟರ್

5. ಐದನೇ ಟೆಸ್ಟ್ - ಜುಲೈ 31ರಿಂದ ಆಗಸ್ಟ್ 4, 2025 :ದಿ ಓವಲ್, ಲಂಡನ್.