ಕ್ರೀಡೆ

2019ರಲ್ಲಿ ಬಿಸಿಸಿಐ ಬ್ಯಾಂಕ್​ ಬ್ಯಾಲೆನ್ಸ್​ ಎಷ್ಟಿತ್ತು? ಈಗ ಎಷ್ಟಿದೆ? ನಿಜಕ್ಕೂ ಹುಬ್ಬೇರಿಸುವ ವರದಿ ಇದು | BCCI Bank Balance

BCCI Bank Balance: ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಎಂದೇ ಕರೆಯಲ್ಪಡುವ ಬಿಸಿಸಿಐ, ಇತರೆ ದೇಶಗಳ ಕ್ರಿಕೆಟ್​ ಮಂಡಳಿಗಿಂತ ಎರಡು ಹೆಜ್ಜೆ ಮುಂದೆಯಿದೆ ಎಂಬುದರಲ್ಲಿ ಸಂಶಯವಿಲ್ಲ. ಇದಕ್ಕೆ ಕಾರಣ, ನಡೆಯುವ ಟೂರ್ನಿಗಳು. ಅದರಲ್ಲೂ, ನಿರೀಕ್ಷೆಗೂ ಮೀರಿದ ಲಾಭವನ್ನು ತಂದುಕೊಡುವ ಐಪಿಎಲ್​, ಕ್ರಿಕೆಟ್​ ಪ್ರಿಯರ ಅಚ್ಚುಮೆಚ್ಚಿನ ಟಿ20 ಲೀಗ್​. ಕ್ರಿಕೆಟ್​ ಪ್ರಿಯರನ್ನು ಮಾತ್ರ ರಂಜಿಸುವುದಲ್ಲದೇ, ಮಂಡಳಿಗೆ ಅತ್ಯಧಿಕ ಆದಾಯವನ್ನೇ ತಂದುಕೊಡುತ್ತದೆ.

ಕಳೆದ 5 ವರ್ಷಗಳಲ್ಲಿ...

ಒಂದು ಕಾಲದಲ್ಲಿ, ಬಿಸಿಸಿಐ ಟೂರ್ನಿಗಳನ್ನು ಆಯೋಜಿಸುವಲ್ಲಿ ತೊಂದರೆ ಅನುಭವಿಸುತ್ತಿತ್ತು. ಆದಾಗ್ಯೂ, ಪ್ರಸ್ತುತ, ಬಿಸಿಸಿಐ ತನ್ನ ಖಾತೆಯಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಹೊಂದಿದೆ. ಪ್ರತಿ ವರ್ಷ ಆದಾಯದ ಹಾದಿ ಮುಂದೆ ಸಾಗುತ್ತಲೇ ಇದೆ, ಖಜಾನೆ ತುಂಬುತ್ತಲೇ ಇದೆ. ಕಳೆದ ಐದು ವರ್ಷಗಳಲ್ಲಿ ಬಿಸಿಸಿಐನ ಬ್ಯಾಂಕ್ ಬ್ಯಾಲೆನ್ಸ್ ಅಗಾಧವಾಗಿ ಹೆಚ್ಚಿದೆ ಎಂದು ವರದಿಯಾಗಿದೆ. ಹಾಗಿದ್ದರೆ, ಎಷ್ಟು ಬ್ಯಾಂಕ್ ಬ್ಯಾಲೆನ್ಸ್ ಇತ್ತು? ವರದಿಯಲ್ಲಿ ಉಲ್ಲೇಖಿಸಿರುವ ಮೊತ್ತವೆಷ್ಟು? ಎಂಬುದರ ವಿವರ ಹೀಗಿದೆ.

6,059 ಕೋಟಿ ರೂ.

2019ರಲ್ಲಿ ಬಿಸಿಸಿಐನ ಬ್ಯಾಂಕ್ ಬ್ಯಾಲೆನ್ಸ್ 6,059 ಕೋಟಿ ರೂ.ಗಳಷ್ಟಿತ್ತು. ಇದು 2024ರ ವೇಳೆಗೆ 20,686 ಕೋಟಿ ರೂ. ತಲುಪಿದೆ ಎಂಬ ಸಂಗತಿ ನಿಜಕ್ಕೂ ಗಮನಾರ್ಹ. ಇದರರ್ಥ, ಕಳೆದ 5 ವರ್ಷಗಳಲ್ಲಿ ಬಾಕಿ ಮೊತ್ತ 14,627 ಕೋಟಿ ರೂ.ಗಳಷ್ಟು ಹೆಚ್ಚಾಗಿದೆ. ರಾಜ್ಯ ಕ್ರಿಕೆಟ್ ಸಂಘಗಳಿಗೆ ಎಲ್ಲಾ ಬಾಕಿಗಳನ್ನು ಪಾವತಿಸಿದ ನಂತರವೇ ಈ ಮೊತ್ತ ಲಭ್ಯವಿದೆ. ಕಳೆದ ಹಣಕಾಸು ವರ್ಷದಲ್ಲಿ ಮಾತ್ರ ಬಿಸಿಸಿಐ ಖಾತೆಗೆ 4,193 ಕೋಟಿ ರೂ. ಜಮೆಯಾಗಿದೆ. ರಾಜ್ಯ ಕ್ರಿಕೆಟ್ ಸಂಘಗಳಲ್ಲಿ ವಿತರಿಸಲಾದ ವರದಿಯಲ್ಲಿ ಈ ವಿವರಗಳನ್ನು ಬಹಿರಂಗಪಡಿಸಲಾಗಿದೆ.

ಐಪಿಎಲ್ ಲಾಭ

ಬಿಸಿಸಿಐನ ಸಾಮಾನ್ಯ ನಿಧಿ ಈಗ ದ್ವಿಗುಣಗೊಂಡಿದೆ ಎಂದು 'ಕ್ರಿಕ್‌ಬಜ್' ವರದಿ ಉಲ್ಲೇಖಿಸಿದೆ. 2019ರಲ್ಲಿ 3,906 ಕೋಟಿ ರೂ.ಗಳಿಂದ 2024ರಲ್ಲಿ 7,988 ಕೋಟಿ ರೂ.ಗಳಿಗೆ ತಲುಪಿದೆ ಎಂದು ಹೇಳಲಾಗಿದೆ. ಇದು 4,082 ಕೋಟಿ ರೂ.ಗಳ ಬೆಳವಣಿಗೆಯನ್ನು ದಾಖಲಿಸಿದೆ. ಬಿಸಿಸಿಐನ ಈ ಆರ್ಥಿಕ ಯಶಸ್ಸಿಗೆ ಬಹುಮುಖ್ಯ ಕಾರಣಗಳು ಐಪಿಎಲ್‌ನಿಂದ ಬರುವ ನಿರೀಕ್ಷೆಗೂ ಮೀರಿದ ಲಾಭ ಮತ್ತು ಐಸಿಸಿಯಿಂದ ಬರುವ ಆದಾಯ.

ಐಪಿಎಲ್ ಲಾಭ ಮತ್ತು ಐಸಿಸಿ ವಿತರಣೆಗಳ ಸಹಾಯದಿಂದ, ಬಿಸಿಸಿಐ 2023-24ರಲ್ಲಿ 1,623.08 ಕೋಟಿ ರೂ. ಹೆಚ್ಚುವರಿಯನ್ನು ದಾಖಲಿಸಿದೆ. ಇದು ಕಳೆದ ವರ್ಷದ 1,167.99 ಕೋಟಿ ರೂ.ಗಳಿಗಿಂತ ದುಪ್ಪಟ್ಟಾಗಿದೆ. 2023-24ರಲ್ಲಿ, ಬಿಸಿಸಿಐ ಮೂಲಸೌಕರ್ಯ ಅಭಿವೃದ್ಧಿಗಾಗಿ 1,200 ಕೋಟಿ ರೂ., ಪ್ಲಾಟಿನಂ ಜುಬಿಲಿ ಬೆನೆವೊಲೆಂಟ್ ಫಂಡ್‌ಗೆ 350 ಕೋಟಿ ರೂ. ಮತ್ತು ಕ್ರಿಕೆಟ್ ಅಭಿವೃದ್ಧಿಗೆ 500 ಕೋಟಿ ರೂ. ಹಣವನ್ನು ಹಂಚಿಕೆ ಮಾಡಿದೆ. ರಾಜ್ಯ ಸಂಘಗಳು 1,990.18 ಕೋಟಿ ರೂ. ಪಡೆದಿವೆ ಮತ್ತು ಪ್ರಸ್ತುತ ವರ್ಷಕ್ಕೆ 2,013.97 ಕೋಟಿ ರೂ. ಪಡೆಯಲಿವೆ ಎಂದು ವರದಿ ತಿಳಿಸಿದೆ.

ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆ ಸೆಪ್ಟೆಂಬರ್ 28ರಂದು ನಡೆಯಲಿದ್ದು, ಸಭೆಯಲ್ಲಿ ಈ ವಿವರಗಳನ್ನು ಅಧಿಕೃತವಾಗಿ ಘೋಷಿಸಲಾಗುವುದು ಎಂದು ವರದಿಯಾಗಿದೆ,(ಏಜೆನ್ಸೀಸ್).