ಕ್ರೀಡೆ

ನಕಲಿ ಟಿ20 ಲೀಗ್​ ಪ್ರಕರಣ, ಡ್ರೀಮ್​ ಇಲೆವೆನ್​ ವಿರುದ್ಧ ಬಿಸಿಸಿಐ ದೂರು

ನವದೆಹಲಿ: ಮೊಹಾಲಿ ನಡೆದ ಪಂದ್ಯವೊಂದನ್ನು ಶ್ರೀಲಂಕಾದಲ್ಲಿನ ಉವಾ ಟಿ20 ಲೀಗ್​ ಪಂದ್ಯದಂತೆ ಆನ್​ಲೈನ್​ನಲ್ಲಿ ನೇರಪ್ರಸಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ), ಜನಪ್ರಿಯ ಮೊಬೈಲ್ ​ಫ್ಯಾಂಟಸಿ ಸ್ಪೋರ್ಟ್ಸ್​ ಆ್ಯಪ್​ ಡ್ರೀಮ್​ ಇಲೆವೆನ್​ ವಿರುದ್ಧ ದೂರು ನೀಡಿದೆ. ನಕಲಿ ಟಿ20 ಲೀಗ್​ ಪ್ರಕರಣದಲ್ಲಿ ಡ್ರೀಮ್​ ಇಲೆವೆನ್​ ಯಾವ ರೀತಿಯ ಸಂಬಂಧ ಹೊಂದಿದೆ ಎಂದು ತನಿಖೆ ನಡೆಸುವಂತೆ ಬಿಸಿಸಿಐ, ಪಂಜಾಬ್​ ಪೊಲೀಸರಿಗೆ ಮನವಿ ಸಲ್ಲಿಸಿದೆ. ಬಿಸಿಸಿಐ ಪ್ರಮುಖ ಪ್ರಾಯೋಜಕ ಕಂಪನಿಗಳಲ್ಲಿ ಡ್ರೀಮ್​ ಇಲೆವೆನ್​ ಕೂಡ ಒಂದಾಗಿರುವ ನಡುವೆಯೂ ಅದರ ವಿರುದ್ಧ ದೂರು ಸಲ್ಲಿಸಿರುವುದು ಅಚ್ಚರಿ ಸೃಷ್ಟಿಸಿದೆ.

ಸಾಕಷ್ಟು ಕ್ರಿಕೆಟ್​ ಪ್ರೇಮಿಗಳನ್ನು ಸೆಳೆದಿರುವ ಡ್ರೀಮ್​ ಇಲೆವೆನ್​ ಮತ್ತು ಅದರ ಭಾಗವಾಗಿರುವ ಫ್ಯಾನ್​ಕೋಡ್​ ಆ್ಯಪ್​ ವಿರುದ್ಧ ಬಿಸಿಸಿಐ ದೂರು ದಾಖಲಿಸಿದೆ. ಫ್ಯಾನ್​ಕೋಡ್​ ವೆಬ್​ಸೈಟ್​ ಮತ್ತು ಆ್ಯಪ್​ ಮೂಲಕ ಉವಾ ಟಿ20 ಲೀಗ್​ ಪಂದ್ಯ ನೇರಪ್ರಸಾರ ಕಂಡಿದೆ. ಶ್ರೀಲಂಕಾದಲ್ಲಿ ನಡೆಯುತ್ತಿರುವ ಲೀಗ್​ನ ಪಂದ್ಯದಂತೆ ಇದನ್ನು ಪ್ರಸಾರ ಮಾಡಲಾಗಿದೆ. ಆದರೆ ಇದು ಮೊಹಾಲಿಯ ಸವರ ಗ್ರಾಮದಲ್ಲಿ ಆಡಲಾದ ಕ್ಲಬ್​ ಕ್ರಿಕೆಟ್​ ಪಂದ್ಯವಾಗಿತ್ತು. ಉವಾ ಎಂಬುದು ಶ್ರೀಲಂಕಾದಲ್ಲಿನ ಪ್ರಾಂತ್ಯವೊಂದರ ಹೆಸರಾಗಿದೆ. ಡ್ರೀಮ್​ ಇಲೆವೆನ್​ ಮತ್ತು ಫ್ಯಾನ್​ಕೋಡ್​ಗಳು ಸ್ಪೋರ್ಟ್ಸ್​ ಟೆಕ್​ ಕಂಪನಿಗೆ ಒಳಪಟ್ಟಿದ್ದು, ಭಾರತೀಯರು ಆರಂಭಿಸಿದ ಈ ಕಂಪನಿಯಲ್ಲಿ ಈಗ ಚೀನಾ ಕಂಪನಿಯೂ ಹೂಡಿಕೆ ಮಾಡಿದೆ. ಡ್ರೀಮ್​ ಇಲೆವೆನ್​ ಐಪಿಎಲ್​ನ ಪ್ರಾಯೋಜಕತ್ವ ಹೊಂದಿದೆ.

ಪ್ರಕರಣದಲ್ಲಿ ಡ್ರೀಮ್​ ಇಲೆವೆನ್​ ಕೂಡ ಒಳಗೊಂಡಿರುವ ಸಾಧ್ಯತೆ ಇದೆ ಎಂದು ಮೊಹಾಲಿ ಪೊಲೀಸರು ತಿಳಿಸಿದ್ದಾರೆ. ಪಂದ್ಯದಲ್ಲಿ ಬಳಸಲಾದ ಕಿಟ್​ಗಳು ಈ ಹಿಂದಿನ ಡ್ರೀಮ್​ ಇಲೆವೆನ್​ ಟೂನಿರ್ಯದ್ದಾಗಿವೆ. ಅಲ್ಲದೆ ಅವುಗಳಲ್ಲಿ ಡ್ರೀಮ್​ ಇಲೆವೆನ್​ ಎಂದು ಬರೆಯಲಾಗಿದೆ. ಇವುಗಳನ್ನು ನಕಲಿಯಾಗಿಯೂ ಬಳಸಿರಬಹುದು. ಈ ಎರಡೂ ಸಾಧ್ಯತೆಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.