ಕ್ರೀಡೆ

ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕಕ್ಕೆ ಜಮ್ಮು-ಕಾಶ್ಮೀರ ಮೊದಲ ಎದುರಾಳಿ

ಬೆಂಗಳೂರು: ಕರೊನಾ ಹಾವಳಿಯ ನಡುವೆ ದೇಶದ 6 ನಗರಗಳ ಬಯೋ-ಬಬಲ್ ವಲಯದಲ್ಲಿ ನಡೆಯಲಿರುವ ದೇಶೀಯ ಕ್ರಿಕೆಟ್ ಋತುವಿನ ಮೊದಲ ಟೂರ್ನಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಹಾಲಿ ಚಾಂಪಿಯನ್ ಕರ್ನಾಟಕ ತಂಡ ಜನವರಿ 10ರಂದು ತನ್ನ ಮೊದಲ ಪಂದ್ಯದಲ್ಲಿ ಜಮ್ಮು-ಕಾಶ್ಮೀರ ತಂಡವನ್ನು ಎದುರಿಸಲಿದೆ.

ಕರ್ನಾಟಕ ತಂಡ ಎ ಗುಂಪಿನಲ್ಲಿದ್ದು, ಎಲ್ಲ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿವೆ. ಕರ್ನಾಟಕ ತಂಡ ಜನವರಿ 12ರಂದು ಪಂಜಾಬ್, ಜನವರಿ 14ರಂದು ತ್ರಿಪುರ, ಜನವರಿ 16ರಂದು ರೈಲ್ವೇಸ್ ಮತ್ತು ಜನವರಿ 16ರಂದು ಉತ್ತರ ಪ್ರದೇಶ ವಿರುದ್ಧ ಆಡಲಿದೆ.

ಇತರ ಗುಂಪಿನ ಪಂದ್ಯಗಳು ಮುಂಬೈ, ಚೆನ್ನೈ, ಕೋಲ್ಕತ, ಇಂದೋರ್, ವಡೋದರದಲ್ಲಿ ನಡೆಯಲಿವೆ. ಎಲ್ಲ ತಂಡಗಳು ಜನವರಿ 2ರೊಳಗಾಗಿ ಆತಿಥೇಯ ನಗರದಲ್ಲಿ ಕರೊನಾ ಪರೀಕ್ಷೆ ಮತ್ತು ಆಯಾ ರಾಜ್ಯಗಳ ಕ್ವಾರಂಟೈನ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಬಯೋ-ಬಬಲ್ ವಲಯವನ್ನು ಪ್ರವೇಶಿಸಬೇಕು ಎಂದು ಬಿಸಿಸಿಐ ತಿಳಿಸಿದೆ.

20 ಆಟಗಾರರ ತಂಡ: ಕರೊನಾ ಭೀತಿಯಿಂದಾಗಿ ಎಲ್ಲ ತಂಡಗಳು ಬಯೋ-ಬಬಲ್‌ನಲ್ಲಿ ಇರಬೇಕಾಗಿರುವ ಕಾರಣ ಪ್ರತಿ ತಂಡಕ್ಕೆ ಗರಿಷ್ಠ 20 ಆಟಗಾರರು ಮತ್ತು 10 ತರಬೇತಿ ಸಿಬ್ಬಂದಿಯನ್ನು ಹೊಂದಿರಲು ಅವಕಾಶ ನೀಡಲಾಗಿದೆ. ಕೋವಿಡ್-19 ಸಂಬಂಧಿತ ವಿಷಯಗಳ ಮೇಲ್ವಿಚಾರಣಗಾಗಿಯೇ ಪ್ರತಿ ತಂಡ ಓರ್ವ ಫಿಸಿಯೋನನ್ನು ಹೊಂದಿರಬೇಕೆಂದು ಬಿಸಿಸಿಐ ಸೂಚಿಸಿದೆ.

3 ಬಾರಿ ಕರೊನಾ ಪರೀಕ್ಷೆ: ಟೂರ್ನಿಯಲ್ಲಿ ಆಡಲಿರುವ ಎಲ್ಲ ಆಟಗಾರರು ಮತ್ತು ತರಬೇತಿ ಸಿಬ್ಬಂದಿ ಜನವರಿ 2, 4 ಮತ್ತು 6ರಂದು 3 ಬಾರಿ ಕೋವಿಡ್-19 ಪರೀಕ್ಷೆಗೆ ಒಳಪಡಬೇಕಾಗಿದೆ. ಆಯಾ ಪರೀಕ್ಷೆಗಳ ವರದಿಗಳು ಮರುದಿನವೇ ಪ್ರಕಟಗೊಳ್ಳಲಿವೆ. ಬಳಿಕ ನಾಕೌಟ್ ಪಂದ್ಯಗಳಿಗೆ ಮುನ್ನವೂ ಜನವರಿ 20 ಮತ್ತು 22ರಂದು ಆಟಗಾರರು ಮತ್ತೊಮ್ಮೆ ಕೋವಿಡ್-19 ಪರೀಕ್ಷೆಗೆ ಒಳಗಾಗಬೇಕಾಗಿದೆ.

ಕರ್ನಾಟಕದ ಪಂದ್ಯಗಳು

ದಿನಾಂಕ: ಎದುರಾಳಿ

ಜನವರಿ 10: ಜಮ್ಮು-ಕಾಶ್ಮೀರ

ಜನವರಿ 12: ಪಂಜಾಬ್

ಜನವರಿ 14: ತ್ರಿಪುರ

ಜನವರಿ 16: ರೈಲ್ವೇಸ್

ಜನವರಿ 18: ಉತ್ತರ ಪ್ರದೇಶ

ಅಗ್ರ ತಂಡಗಳು ನಾಕೌಟ್‌ಗೆ

38 ತಂಡಗಳನ್ನು 6 ಗುಂಪುಗಳಲ್ಲಿ ವಿಭಾಗಿಸಲಾಗಿದ್ದು, ಇದರಲ್ಲಿ ತಲಾ 6 ತಂಗಳ 5 ಎಲೈಟ್ ಮತ್ತು 8 ತಂಡಗಳ 1 ಪ್ಲೇಟ್ ಗುಂಪು ಇವೆ. ರೌಂಡ್ ರಾಬಿನ್ ಲೀಗ್ ಹಂತದ ಬಳಿಕ ಪ್ರತಿ ಗುಂಪಿನ ಅಗ್ರ ತಂಡಗಳು ನಾಕೌಟ್ ಹಂತಕ್ಕೇರಲಿವೆ. ಇದಲ್ಲದೆ 5 ಎಲೈಟ್ ಗುಂಪಿನಿಂದ 2ನೇ ಸ್ಥಾನ ಪಡೆದ 2 ಅತ್ಯುತ್ತಮ ತಂಡಗಳು ನಾಕೌಟ್ ಹಂತಕ್ಕೇರಲಿವೆ. ನಾಕೌಟ್ ಪಂದ್ಯಗಳು ಜನವರಿ 26ರಿಂದ ಅಹಮದಾಬಾದ್‌ನಲ್ಲಿ ನಡೆಯಲಿವೆ. ಜನವರಿ 26 ಮತ್ತು 27ರಂದು ಕ್ವಾರ್ಟರ್​ಫೈನಲ್, ಜನವರಿ 29ರಂದು ಸೆಮಿಫೈನಲ್ಸ್ ಮತ್ತು ಜನವರಿ 31ರಂದು ಫೈನಲ್ ಪಂದ್ಯ ನಡೆಯಲಿದೆ.

ಗುಂಪುಗಳು:

ಎಲೈಟ್ ಎ: ಕರ್ನಾಟಕ, ಪಂಜಾಬ್, ಉತ್ತರ ಪ್ರದೇಶ, ಜಮ್ಮು-ಕಾಶ್ಮೀರ, ರೈಲ್ವೇಸ್, ತ್ರಿಪುರ; ಸ್ಥಳ: ಬೆಂಗಳೂರು.

ಎಲೈಟ್ ಬಿ: ಒಡಿಶಾ, ಬಂಗಾಳ, ಜಾರ್ಖಂಡ್, ತಮಿಳುನಾಡು, ಅಸ್ಸಾಂ, ಹೈದರಾಬಾದ್; ಸ್ಥಳ: ಕೋಲ್ಕತ.

ಎಲೈಟ್ ಸಿ: ಗುಜರಾತ್, ಮಹಾರಾಷ್ಟ್ರ, ಛತ್ತೀಸ್‌ಗಢ, ಹಿಮಾಚಲ ಪ್ರದೇಶ, ಬರೋಡ, ಉತ್ತರಾಖಂಡ; ಸ್ಥಳ: ವಡೋದರ.

ಎಲೈಟ್ ಡಿ: ಸರ್ವಿಸಸ್, ಸೌರಾಷ್ಟ್ರ, ವಿದರ್ಭ, ರಾಜಸ್ಥಾನ, ಮಧ್ಯಪ್ರದೇಶ, ಗೋವಾ; ಸ್ಥಳ: ಇಂದೋರ್.

ಎಲೈಟ್ ಇ: ಹರಿಯಾಣ, ಆಂಧ್ರ ಪ್ರದೇಶ, ದೆಹಲಿ, ಮುಂಬೈ, ಕೇರಳ, ಪುದುಚೇರಿ; ಸ್ಥಳ: ಮುಂಬೈ.

ಪ್ಲೇಟ್: ಚಂಡೀಗಢ, ಮೇಘಾಲಯ, ಬಿಹಾರ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ಸಿಕ್ಕಿಂ, ಅರುಣಾಚಲ ಪ್ರದೇಶ; ಸ್ಥಳ: ಚೆನ್ನೈ.