ಕ್ರೀಡೆ

ಇನ್ನು ವಲಸೆ ಕ್ರಿಕೆಟಿಗರಿಗೆ ಹೆಚ್ಚುವರಿ ಭತ್ಯೆ ನೀಡುವಂತಿಲ್ಲ! ಪಂದ್ಯ ಸಂಭಾವನೆ ಮಾತ್ರ ನೀಡಲು ರಾಜ್ಯಗಳಿಗೆ ಬಿಸಿಸಿಐ ಸೂಚನೆ

ಪಣಜಿ: ಬೇರೆ ರಾಜ್ಯಗಳಿಂದ ವಲಸೆ ಬರುವ ಪ್ರಮುಖ ಕ್ರಿಕೆಟಿಗರಿಗೆ ಹೆಚ್ಚುವರಿ ಭತ್ಯೆ ನೀಡುವ ಪದ್ಧತಿಯನ್ನು ನಿಲ್ಲಿಸಲು ರಾಜ್ಯ ಕ್ರಿಕೆಟ್​ ಸಂಸ್ಥೆಗಳಿಗೆ ಬಿಸಿಸಿಐ ಸೂಚನೆ ನೀಡಿದೆ. ಜತೆಗೆ ವಲಸೆ ಆಟಗಾರರಿಗೂ ತಂಡದ ಇತರ ದೇಶೀಯ ಆಟಗಾರರಂತೆ ಪಂದ್ಯ ಸಂಭಾವನೆಯನ್ನು ಮಾತ್ರ ನೀಡಬೇಕೆಂದು ಸೂಚಿಸಲಾಗಿದೆ. ಸೋಮವಾರ ಗೋವಾದಲ್ಲಿ ನಡೆದ ಬಿಸಿಸಿಐನ 92ನೇ ವಾರ್ಷಿಕ ಮಹಾಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಬಿಸಿಸಿಐ ಸೂಚನೆಯನ್ನು ರಾಜ್ಯ ಕ್ರಿಕೆಟ್​ ಸಂಸ್ಥೆಗಳು ಸಭೆಯಲ್ಲಿ ಒಪ್ಪಿಕೊಂಡಿವೆ. ಆದರೆ ಇದು ಹಾಲಿ ದೇಶೀಯ ಕ್ರಿಕೆಟ್​ ಋತುವಿನಿಂದಲೇ ಜಾರಿಯಾಗುವುದೇ ಅಥವಾ ಮುಂದಿನ ವರ್ಷದಿಂದ ಜಾರಿಯಾಗುವುದೇ ಎಂಬುದು ಸ್ಪಷ್ಟವಾಗಿಲ್ಲ. ಬಿಸಿಸಿಐ ನಿಯಮದ ಪ್ರಕಾರ, ರಾಜ್ಯ ಕ್ರಿಕೆಟ್​ ಸಂಸ್ಥೆಯೊಂದು 3 ವಲಸೆ ಆಟಗಾರರನ್ನು ಹೊಂದಬಹುದಾಗಿದೆ. ಇದರನ್ವಯ ಕೆಲ ದುರ್ಬಲ ತಂಡಗಳು ಬಲಿಷ್ಠ ತಂಡಗಳ ಹಿರಿಯ ಆಟಗಾರರನ್ನು ಅತಿಥಿ ಆಟಗಾರರನ್ನಾಗಿ ಸೇರಿಸಿಕೊಂಡು ಅವರಿಗೆ ಹೆಚ್ಚಿನ ಭತ್ಯೆ ನೀಡುತ್ತಿದ್ದವು. ಇನ್ನು ಮುಂದೆ ರಾಜ್ಯ ತಂಡಗಳಿಗೆ ಇದೇ ರೀತಿ ವಲಸೆ ಆಟಗಾರರನ್ನು ಸೇರಿಸಿಕೊಳ್ಳುವ ಅವಕಾಶ ಇರುತ್ತದಾದರೂ, ಇದಕ್ಕಾಗಿ ಹೆಚ್ಚುವರಿ ಭತ್ಯೆಯ ಆಮಿಷ ಒಡ್ಡುವಂತಿರುವುದಿಲ್ಲ.

ಹಾಲಿ ಋತುವಿನಲ್ಲಿ ಕರ್ನಾಟಕದ ನಾಲ್ವರು ಆಟಗಾರರು ಇದೇ ರೀತಿ ವಲಸೆ ಹೋಗಿದ್ದಾರೆ. ಕರುಣ್​ ನಾಯರ್​ ವಿದರ್ಭ, ಶ್ರೇಯಸ್​ ಗೋಪಾಲ್​ ಕೇರಳ, ಕೆವಿ ಸಿದ್ಧರ್ಥ್​ ಮತ್ತು ರೋಹನ್​ ಕದಂ ಗೋವಾಗೆ ವಲಸೆ ಹೋಗಿದ್ದಾರೆ. ಇವರು ಹೆಚ್ಚುವರಿ ಮೊತ್ತಕ್ಕಿಂತ ಹೆಚ್ಚಿನ ಕ್ರಿಕೆಟ್​ ಆಡುವ ಅವಕಾಶಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಒಂಬುಡ್ಸ್​ಮನ್​ ಮತ್ತು ಎಥಿಕ್ಸ್​ ಅಧಿಕಾರಿ ನ್ಯಾಯಮೂರ್ತಿ ವಿನೀತ್​ ಶರಣ್​ ಅವಧಿಯನ್ನು ಒಂದು ವರ್ಷದ ಮಟ್ಟಿಗೆ ವಿಸ್ತರಿಸಲು ಕೂಡ ಬಿಸಿಸಿಐ ನಿರ್ಧರಿಸಿದೆ. ಇನ್ನು ಮಂಡಳಿ ಮತ್ತು ರಾಜ್ಯ ಸಂಸ್ಥೆಗಳ ಪದಾಧಿಕಾರಿಗಳ ವಿರುದ್ಧ ಕೆಲ ಸುಳ್ಳು ದೂರುಗಳು ದಾಖಲಾಗುತ್ತಿರುವುದರಿಂದ, ದೂರುದಾರರಿಂದ ನಿಶ್ಚಿತ ಮೊತ್ತದ ಠೇವಣಿ ಹಣ ಸಂಗ್ರಹಿಸುವ ಕುರಿತು ಯೋಚಿಸುವಂತೆ ಎಥಿಕ್ಸ್​ ಅಧಿಕಾರಿಗೆ ಬಿಸಿಸಿಐ ಸೂಚಿಸಿದೆ. ಅಲ್ಲದೆ ದೂರು ಸಾಬೀತಾದರೆ ಠೇವಣಿ ಹಣ ಹಿಂದಿರುಗಿಸುವಂತೆ ಮತ್ತು ಇಲ್ಲದಿದ್ದರೆ ಅದನ್ನು ಹಿಂದಿರುಗಿಸಬಾರದು ಎಂದು ತಿಳಿಸಿದೆ.