ಕ್ರೀಡೆ

ಈತ ಕ್ರಿಕೆಟ್​ನ ಗೌರವಿಸುತ್ತಿಲ್ಲ! ಶ್ರೇಯಸ್​ ಅಯ್ಯರ್​ ವಿರುದ್ಧ ಸಿಡಿದೆದ್ದ ಪಾಕ್​ ಮಾಜಿ ಆಟಗಾರ

ನವದೆಹಲಿ: ಪ್ರಸಕ್ತ ನಡೆಯುತ್ತಿರುವ ದುಲೀಪ್ ಟ್ರೋಫಿಯ ಡಿ ತಂಡದ ಕ್ಯಾಪ್ಟನ್ ಆಗಿರುವ ಟೀಮ್ ಇಂಡಿಯಾದ ಸ್ಟಾರ್​ ಆಟಗಾರ​ ಶ್ರೇಯಸ್​ ಅಯ್ಯರ್ ಸಮಯ ಅದ್ಯಾಕೋ ಸರಿಯಿಲ್ಲ ಎನ್ನುವಂತೆ ಕಾಣುತ್ತಿದೆ. ಇದಕ್ಕೆ ಕಾರಣ ಇತ್ತೀಚೆಗೆ ನಡೆದ ಭಾರತ ಎ ಮತ್ತು ಡಿ ನಡುವಿನ ಪಂದ್ಯದಲ್ಲಿ ತಂಡದ ಪರ ಶ್ರೇಯಸ್​ ನೀಡಿದ ಬ್ಯಾಟಿಂಗ್ ವೈಖರಿ ಸದ್ಯ ವ್ಯಾಪಕ ಟೀಕೆ, ವ್ಯಂಗ್ಯಕ್ಕೆ ಗುರಿಯಾಗಿದ್ದಾರೆ. ಮ್ಯಾಚ್​​ನಲ್ಲಿ ಬ್ಯಾಟಿಂಗ್​ಗೆಂದು ಕ್ರೀಸ್​ಗೆ ಬಂದ ಅಯ್ಯರ್​, ಹೆಚ್ಚು ಕಾಲ ನಿಂತು ಟೀಮ್​ಗೆ ಆಸರೆಯಾಗಲಿದ್ದಾರೆ ಎಂದು ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ಕಂಡಿದ್ದು ಕಳಪೆ ಪ್ರದರ್ಶನ ಬಿಟ್ಟರೆ ಮತ್ತೇನು ಅಲ್ಲ.

ಸ್ಟೈಲಿಶ್​ ಆಗಿ ಆಡಬೇಕೇ ಹೊರತು ಸ್ಟೈಲಿಶ್​ ಲುಕ್​ ಅಲ್ಲ ಎಂದೆಲ್ಲಾ ಜಾಲತಾಣಗಳಲ್ಲಿ ಟೀಕಿಸಿದ ನೆಟ್ಟಿಗರು, ಶ್ರೇಯಸ್​​ ಅಯ್ಯರ್​ ವಿರುದ್ಧ ವ್ಯಾಪಕ ಟ್ರೋಲ್​ ಮಾಡಿ, ವ್ಯಂಗ್ಯವಾಡಿದರು. ಸದ್ಯ ಟೀಮ್​ ಇಂಡಿಯಾ ಬಗ್ಗೆ ಯಾವುದಾದರೂ ಒಂದು ವಿಷಯ ಸಿಕ್ಕಿದರೆ ಸಾಕು, ಅದನ್ನೇ ಮುಂದಿಟ್ಟು ಟೀಕಿಸಲು ಕಾದು ಕೂರುವ ಪಾಕ್​ ಆಟಗಾರರು ಇದೀಗ ಶ್ರೇಯಸ್​ ಅಯ್ಯರ್​ ಕಳಪೆ ಪ್ರದರ್ಶನವನ್ನೇ ಟೀಕೆಗೆ ಸರಿಯಾದ ಅಸ್ತ್ರವೆಂದು ಭಾವಿಸಿದ್ದಾರೆ. ಸದ್ಯ ಈ ಸಾಲಿನಲ್ಲಿ ಮುಂಚೂಣಿಯಲ್ಲಿರುವುದು ಪಾಕಿಸ್ತಾನ ಕ್ರಿಕೆಟ್​ನ ಮಾಜಿ ಆಟಗಾರ ಬಸಿತ್ ಅಲಿ.

"ಮುಂದಿನ ದಿನಗಳಲ್ಲಿ ಟೆಸ್ಟ್ ಪಂದ್ಯಗಳನ್ನು​ ಆಡಲು ಅಯ್ಯರ್​ಗೆ ಭವಿಷ್ಯವಿಲ್ಲ. ಕ್ರಿಕೆಟ್​ಗೆ ಶ್ರೇಯಸ್​ ಯೋಗ್ಯನಲ್ಲ. ಅಂದು ವಿಶ್ವಕಪ್ ಪಂದ್ಯದಲ್ಲಿ ಎರಡು ಶತಕ ಬಾರಿಸಿದ ಅಯ್ಯರ್​, ಐಪಿಎಲ್​ನಲ್ಲಿ ಕೊಲ್ಕತ್ತ ನೈಟ್ ರೈಡರ್ಸ್​ ತಂಡವನ್ನು ಚಾಂಪಿಯನ್​ ಪಟ್ಟಕೇರಿಸಿದ ಸ್ಟಾರ್​ ಆಟಗಾರ. ಇದನ್ನು ಗಮನದಲ್ಲಿಟ್ಟುಕೊಂಡು ನೋಡುವುದಾದರೆ, ಪ್ರಸಕ್ತ ನಡೆಯುತ್ತಿರುವ ದುಲೀಪ್ ಟ್ರೋಫಿಯಲ್ಲಿ ಆತ 100ರಿಂದ 200 ರನ್​ ಸಿಡಿಸಬೇಕಿತ್ತು" ಎಂದು ಹೇಳಿದರು.

"ಆದ್ರೆ, ಅದು ಸಾಧ್ಯವಾಗಿಲ್ಲ. ದೇಶಿಯ ಕ್ರಿಕೆಟ್​ನಲ್ಲಿ ಅಜಿಂಕ್ಯಾ ರಹಾನೆ ಮತ್ತು ಪೂಜಾರಾ ಆಡದೆ ಇರುವುದೇ ಆತನಿಗೆ ಲಕ್ಕಿಯಾಗಿದೆ. ನನ್ನ ಪ್ರಕಾರ, ಶ್ರೇಯಸ್​​ಗೆ ಆಟದ ಮೇಲೆ ಗಮನ ಇಲ್ಲ ಎಂಬಂತೆ ತೋರುತ್ತಿದೆ" ಎಂದು ಟೀಕಿಸಿದ್ದಾರೆ,(ಏಜೆನ್ಸೀಸ್).