ಇಂದೋರ್: ಬರೋಡ ತಂಡ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ರನ್ಪ್ರವಾಹ ಹರಿಸುವ ಮೂಲಕ ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವದಾಖಲೆ ನಿರ್ಮಿಸಿದೆ. ಸಿಕ್ಕಿಂ ವಿರುದ್ಧದ ಪಂದ್ಯದಲ್ಲಿ ಗರಿಷ್ಠ ಮೊತ್ತ ಪೇರಿಸಿದ ಬರೋಡ ತಂಡ ದಾಖಲೆಯ 263 ರನ್ಗಳಿಂದ ಗೆದ್ದು ನಾಕೌಟ್ ಪ್ರವೇಶಿಸಿತು.
ಎಮರಾಲ್ಡ್ ಹೈಸ್ಕೂಲ್ ಗ್ರೌಂಡ್ನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದ ಬರೋಡ, ಬಾನು ಪನಿಯಾ (134*ರನ್, 51 ಎಸೆತ, 5 ಬೌಂಡರಿ, 15 ಸಿಕ್ಸರ್) ಶತಕ ಮತ್ತು ಇತರ ಬ್ಯಾಟರ್ಗಳ ಆರ್ಭಟದ ಬಲದಿಂದ 5 ವಿಕೆಟ್ಗೆ 349 ರನ್ ಪೇರಿಸಿತು. ಬರೋಡ ಪ್ರತಿ ಓವರ್ಗೆ 17.45ರ ಸರಾಸರಿಯಲ್ಲಿ ರನ್ ಸೂರೆಗೈದಿತು. ಅಭಿಮನ್ಯುಸಿಂಗ್ (53), ಶಿವಾಲಿಕ್ ಶರ್ಮ (55) ಮತ್ತು ವಿಷ್ಣು ಸೋಲಂಕಿ (50) ಅರ್ಧಶತಕ ಸಿಡಿಸಿದರು. ಬರೋಡ ಇನಿಂಗ್ಸ್ನಲ್ಲಿ ಒಟ್ಟು 18 ಬೌಂಡರಿ ಮತ್ತು 37 ಸಿಕ್ಸರ್ ಸಿಡಿಯಿತು. ಅಂದರೆ 294 ರನ್ಗಳು ಬೌಂಡರಿ&ಸಿಕ್ಸರ್ ಮೂಲಕವೇ ಬಂದವು. ಪ್ರತಿಯಾಗಿ ಸಿಕ್ಕಿಂ 20 ಓವರ್ ಪೂರ್ತಿ ಆಡಿ 7 ವಿಕೆಟ್ಗೆ 86 ರನ್ ಗಳಿಸಲಷ್ಟೇ ಶಕ್ತವಾಯಿತು.
ಜಿಂಬಾಬ್ವೆ ತಂಡ ಕಳೆದ ಅಕ್ಟೋಬರ್ನಲ್ಲಿ ಗಾಂಬಿಯಾ ವಿರುದ್ಧ ನೈರೋಬಿಯಲ್ಲಿ 4 ವಿಕೆಟ್ಗೆ 344 ರನ್ ಪೇರಿಸಿದ್ದು ಹಿಂದಿನ ವಿಶ್ವದಾಖಲೆಯಾಗಿತ್ತು. ಭಾರತ ತಂಡ ಇತ್ತೀಚೆಗೆ ಬಾಂಗ್ಲಾ ವಿರುದ್ಧ ಹೈದರಾಬಾದ್ನಲ್ಲಿ 6 ವಿಕೆಟ್ಗೆ 297 ರನ್ ಪೇರಿಸಿತ್ತು. ಇದೀಗ ಬರೋಡ ತಂಡ ಹೊಸ ಭಾರತೀಯ ದಾಖಲೆಯನ್ನೂ ಬರೆದಿದೆ. ಜತೆಗೆ ಟಿ20ಯಲ್ಲಿ 300 ಪ್ಲಸ್ ಮೊತ್ತ ಪೇರಿಸಿದ ಮೊದಲ ಭಾರತಿಯ ತಂಡವೆನಿಸಿದೆ.