ಲಾಹೋರ್: ಆರಂಭಿಕ ಮೆಹಿದಿ ಹಸನ್ ಮಿರಾಜ್ (112 ರನ್, 119 ಎಸೆತ, 7 ಬೌಂಡರಿ, 3 ಸಿಕ್ಸರ್) ಮತ್ತು ನಜ್ಮುಲ್ ಹೊಸೈನ್ ಶಾಂಟೊ (104 ರನ್, 105 ಎಸೆತ, 9 ಬೌಂಡರಿ, 2 ಸಿಕ್ಸರ್) ಭರ್ಜರಿ ಶತಕಗಳ ನೆರವಿನಿಂದ ಬಾಂಗ್ಲಾದೇಶ ತಂಡ ಏಷ್ಯಾಕಪ್ ಏಕದಿನ ಕ್ರಿಕೆಟ್ ಟೂರ್ನಿಯ ಬಿ ಗುಂಪಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 89 ರನ್ಗಳಿಂದ ಗೆಲುವು ದಾಖಲಿಸಿದೆ. ಈ ಮೂಲಕ ಶಕೀಬ್ ಅಲ್ ಹಸನ್ ಪಡೆ ಸೂಪರ್-4 ಹಂತಕ್ಕೇರುವ ಆಸೆ ಜೀವಂತ ಉಳಿಸಿಕೊಂಡಿದೆ.
ಪಾಕಿಸ್ತಾನದ ಗದ್ದಾಫಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದ ಬಾಂಗ್ಲಾ, 5 ವಿಕೆಟ್ಗೆ 334 ರನ್ ಪೇರಿಸಿದೆ. ಮೆಹಿದಿ ಹಸನ್ ಮತ್ತು ಶಾಂಟೊ ಜೋಡಿ 3ನೇ ವಿಕೆಟ್ಗೆ 190 ಎಸೆತಗಳಲ್ಲಿ 194 ರನ್ ಸೇರಿಸಿ ಬಾಂಗ್ಲಾ ಇನಿಂಗ್ಸ್ಗೆ ಆಸರೆಯಾದರು. ಶತಕ ಪೂರೈಸಿದ ಬಳಿಕ ಮೆಹಿದಿ ಗಾಯದಿಂದಾಗಿ ಸ್ವಯಂ ನಿವೃತ್ತಿ ಹೊಂದಿದರು. ಕೊನೆಯಲ್ಲಿ ನಾಯಕ ಶಕೀಬ್ ಅಲ್ ಹಸನ್ (32*ರನ್, 18 ಎಸೆತ, 4 ಬೌಂಡರಿ, 1 ಸಿಕ್ಸರ್) ಮೊತ್ತ ಏರಿಸಿದರು. ಅಫ್ಘಾನಿಸ್ತಾನ ಪರ ಅನುಭವಿ ಸ್ಪಿನ್ನರ್ ರಶೀದ್ ಖಾನ್ ಸಹಿತ ಎಲ್ಲ ಬೌಲರ್ಗಳು ದುಬಾರಿಯಾದರು. ಪ್ರತಿಯಾಗಿ ಅಫ್ಘಾನಿಸ್ತಾನ ತಂಡ ವೇಗಿಗಳಾದ ಟಸ್ಕಿನ್ ಅಹ್ಮದ್ (44ಕ್ಕೆ 4) ಮತ್ತು ಶೋರಿುಲ್ ಇಸ್ಲಾಂ (36ಕ್ಕೆ 3) ದಾಳಿಗೆ ಕುಸಿದು 44.3 ಓವರ್ಗಳಲ್ಲಿ 245 ರನ್ಗಳಿಗೆ ಸರ್ವಪತನ ಕಂಡಿತು.
ಬಾಂಗ್ಲಾದೇಶ: 5 ವಿಕೆಟ್ಗೆ 334 (ನೈಮ್ 28, ಮೆಹಿದಿ ಹಸನ್ 112, ಶಾಂಟೊ 104, ಮುಶ್ಪಿಕರ್ ರಹೀಂ 25, ಶಕೀಬ್ 32*, ಮುಜೀಬ್ 62ಕ್ಕೆ 1, ನೈಬ್ 58ಕ್ಕೆ 1). ಅಫ್ಘಾನಿಸ್ತಾನ: 44.3 ಓವರ್ಗಳಲ್ಲಿ 245 (ಗುರ್ಬಜ್ 1, ಜದ್ರಾನ್ 75, ರಹಮತ್ 33, ಹಶ್ಮತುಲ್ಲಾ 51, ನಬಿ 3, ರಶೀದ್ 24, ಟಸ್ಕಿನ್ ಅಹ್ಮದ್ 44ಕ್ಕೆ 4, ಶೋರಿುಲ್ 36ಕ್ಕೆ 3).