ಕ್ರೀಡೆ

ಭರ್ಜರಿ ಸಿಕ್ಸರ್​ ಸಿಡಿಸಿದ ಬಾಂಗ್ಲಾ ಬ್ಯಾಟ್ಸ್​ಮನ್​ ಆದ್ರೆ ಅಂಪೈರ್​ ಕೊಟ್ಟಿದ್ದು ಮಾತ್ರ ಔಟ್​! ಏನಿದು ಟ್ವಿಸ್ಟ್​? BAN vs WI

ಢಾಕಾ : ಮೂರು ಪಂದ್ಯಗಳ ಟಿ20 ಸರಣಿಯ ಭಾಗವಾಗಿ, ಚಿತ್ತಗಾಂಗ್​ನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಮೊದಲ ಟಿ20 ಪಂದ್ಯವನ್ನು ಪ್ರವಾಸಿ ವೆಸ್ಟ್ ಇಂಡೀಸ್ ( BAN vs WI ) ತಂಡ 16 ರನ್‌ಗಳಿಂದ ಗೆದ್ದುಕೊಂಡಿತು.

ಈ ಪಂದ್ಯದಲ್ಲಿ ಕೆರಿಬಿಯನ್​ ಪಡೆ ಮೊದಲು ಬ್ಯಾಟಿಂಗ್​ ಮಾಡಿತು. ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 165 ರನ್ ಗಳಿಸಿತು. ನಾಯಕ ಶೈ ಹೋಪ್ (ಅಜೇಯ 46 ರನ್​, 28 ಎಸೆತ, 1 ಬೌಂಡರಿ, 4 ಸಿಕ್ಸರ್‌), ರೋವ್‌ಮನ್ ಪೊವೆಲ್ (ಅಜೇಯ 44 ರನ್​, 28 ಎಸೆತ, 1 ಬೌಂಡರಿ, 4 ಸಿಕ್ಸರ್‌), ಅಲಿಕ್ ಅಥಾನಾಜ್ (34 ರನ್​, 27 ಎಸೆತ, 4 ಬೌಂಡರಿ, 1 ಸಿಕ್ಸರ್) ಮತ್ತು ಬ್ರಾಂಡನ್ ಕಿಂಗ್ (33 ರನ್​ 36 ಎಸೆತ, 1 ಬೌಂಡರಿ, 2 ಸಿಕ್ಸರ್‌) ವೆಸ್ಟ್ ಇಂಡೀಸ್ ಪರ ಅತ್ಯುತ್ತಮ ಪ್ರದರ್ಶನ ನೀಡಿದರು. ಬಾಂಗ್ಲಾದೇಶ ಪರ ತಸ್ಕಿನ್ ಅಹ್ಮದ್ ಎರಡು ವಿಕೆಟ್ ಪಡೆದರೆ, ರಿಷದ್ ಹುಸೇನ್ ಒಂದು ವಿಕೆಟ್ ಪಡೆದರು.

166 ರನ್​ಗಳ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ 19.4 ಓವರ್​ಗಳಲ್ಲಿ 149 ರನ್ ಗಳಿಗೆ ಆಲೌಟ್ ಆಯಿತು. ಬಾಂಗ್ಲಾದೇಶದ ಪರ ತನ್ಜಿಮ್ ಹಸನ್ ಸಾಕಿಬ್ (33) ಮತ್ತು ತೋಹಿದ್ ಹೃದಯೋಯ್ (28) ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಉಳಿದ ಬ್ಯಾಟ್ಸ್​ಮನ್​ಗಳು ವಿಫಲರಾದರು ಮತ್ತು ಬಾಂಗ್ಲಾದೇಶ ಸೋಲುಂಡಿತು. ವೆಸ್ಟ್ ಇಂಡೀಸ್ ಬೌಲರ್​​ಗಳಲ್ಲಿ ಜೇಡನ್ ಸೀಲ್ಸ್ ಮತ್ತು ಜೇಸನ್ ಹೋಲ್ಡರ್ ತಲಾ ಮೂರು ವಿಕೆಟ್ ಪಡೆದರು. ಅಕೆಲ್ ಹೊಸೈನ್ ಎರಡು ವಿಕೆಟ್ ಪಡೆದರೆ, ಖಾರಿ ಪಿಯರೆ ಮತ್ತು ರೊಮಾರಿಯೊ ಶೆಫರ್ಡ್ ತಲಾ ಒಂದು ವಿಕೆಟ್ ಪಡೆದರು.

ಬಾಂಗ್ಲಾದೇಶ 19 ಓವರ್‌ಗಳಲ್ಲಿ 146 ರನ್​ ಗಳಿಸಿ 9 ವಿಕೆಟ್​ ಕಳೆದುಕೊಂಡಿತ್ತು. ಕೊನೆಯ ಓವರ್‌ನಲ್ಲಿ ಗೆಲ್ಲಲು 20 ರನ್‌ ಬೇಕಿತ್ತು. ಈ ವೇಳೆ ತಸ್ಕಿನ್ ಅಹ್ಮದ್ ಮತ್ತು ಮುಸ್ತಾಫಿಜುರ್ ರೆಹಮಾನ್ ಕ್ರೀಸ್‌ನಲ್ಲಿದ್ದರು. ಈ ಓವರ್ ಅನ್ನು ವೆಸ್ಟ್ ಇಂಡೀಸ್ ಬೌಲರ್ ರೊಮಾರಿಯೊ ಶೆಫರ್ಡ್ ಎಸೆದರು. ಮೊದಲ ಮೂರು ಎಸೆತಗಳಲ್ಲಿ ಮೂರು ರನ್‌ಗಳು ಬಂದವು. ಇದರಿಂದಾಗಿ ಬಾಂಗ್ಲಾದೇಶ ಗೆಲ್ಲಲು ಕೊನೆಯ ಮೂರು ಎಸೆತಗಳಲ್ಲಿ ಮೂರು ಸಿಕ್ಸರ್‌ಗಳನ್ನು ಬಾರಿಸಬೇಕಾಗಿತ್ತು.

ರೊಮಾರಿಯೊ ಶೆಫರ್ಡ್ ನಾಲ್ಕನೇ ಎಸೆತವನ್ನು ಎಸೆದಾಗ, ತಸ್ಕಿನ್ ಅಹ್ಮದ್ ಬೃಹತ್ ಸಿಕ್ಸರ್ ಬಾರಿಸಿದರು. ಇದರೊಂದಿಗೆ, ಬಾಂಗ್ಲಾದೇಶ ಅಭಿಮಾನಿಗಳು ಸಂತೋಷದಿಂದ ಕುಣಿದು ಕುಪ್ಪಳಿಸಿದರು. ಆದಾಗ್ಯೂ, ಅಂಪೈರ್, ತಸ್ಕಿನ್ ಅವರನ್ನು ಔಟ್ ಎಂದು ನಿರ್ಣಯಿಸಿದರು. ಏಕೆಂದರೆ, ತಸ್ಕಿನ್ ಅವರು ಸಿಕ್ಸ್ ಹೊಡೆಯುವಾಗ, ಅವರ ಕಾಲುಗಳು ವಿಕೆಟ್‌ಗಳನ್ನು ಸ್ಪರ್ಶಿಸಿ ಬೇಲ್ಸ್ ಬಿದ್ದವು. ಇದರಿಂದಾಗಿ, ಅಂಪೈರ್ ತಸ್ಕಿನ್‌ಗೆ ಹಿಟ್ ವಿಕೆಟ್ ಎಂದು ಔಟ್ ನೀಡಿದರು. ಪ್ರಸ್ತುತ, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. (ಏಜೆನ್ಸೀಸ್​)