ಲಂಡನ್: ಪ್ರತಿಷ್ಠಿತ ಆಶಸ್ ಟೆಸ್ಟ್ ಸರಣಿಯ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ಭೋಜನ ವಿರಾಮದ ನಂತರದ ಆಟದ ವೇಳೆ ಆಸ್ಟ್ರೆಲಿಯಾದ ಬ್ಯಾಟರ್ ಸ್ಟೀವನ್ ಸ್ಮಿತ್ ರನೌಟ್ ಆದರೆಂದೇ ಎಲ್ಲರೂ ಭಾವಿಸಿದ್ದರು. ಸ್ವತ@ ಸ್ಟೀವನ್ ಸ್ಮಿತ್ ಕೂಡ ಪೆವಿಲಿಯನ್ಗೆ ಮರಳಲು ಸಜ್ಜಾಗಿದ್ದರು. ಆದರೆ ಈ ವೇಳೆ ವಿಡಿಯೋ ಮರುಪ್ರಸಾರವನ್ನು ಸೂಕ್ಷ$್ಮವಾಗಿ ಪರಿಶೀಲಿಸಿದ ತೃತೀಯ ಅಂಪೈರ್ ಆಗಿದ್ದ ಭಾರತದ ನಿತಿನ್ ಮೆನನ್, ನಾಟೌಟ್ ತೀರ್ಪು ನೀಡಿದರು. ರನೌಟ್ ಮಾಡುವ ಸಮಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡದ ವಿಕೆಟ್ ಕೀಪರ್ ಜಾನಿ ಬೇರ್ಸ್ಟೋ ಮಾಡಿದ ಎಡವಟ್ಟನ್ನು ಪತ್ತೆ ಹಚ್ಚುವ ಮೂಲಕ ನಿತಿನ್ ಮೆನನ್ ನಿಯಮ ಸಮ್ಮತವಾದ ದಿಟ್ಟ ತೀರ್ಪು ನೀಡಿದರು. ಇದು ಈಗ ಕ್ರಿಕೆಟ್ ವಲಯದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
ಆಸೀಸ್ ಇನಿಂಗ್ಸ್ನ 78ನೇ ಓವರ್ನಲ್ಲಿ ಸ್ಟೀವನ್ ಸ್ಮಿತ್ 2 ರನ್ ಕಸಿದು ಸ್ಟ್ರೆ$ಕ್ ಕಾಯ್ದುಕೊಳ್ಳಲು ಯತ್ನಿಸಿದರು. ಈ ವೇಳೆ ಬದಲಿ ಫೀಲ್ಡರ್ ಜಾರ್ಜ್ ಎಲ್ಹ್ಯಾಂ ಎಸೆದ ಚೆಂಡನ್ನು ಹಿಡಿದು ಬೇರ್ಸ್ಟೋ ಬೇಲ್ಸ್ ಉರುಳಿಸುವಷ್ಟರಲ್ಲಿ ಸ್ಮಿತ್ ಡೈವ್ ಬಿದ್ದರೂ, ಕ್ರೀಸ್ನಿಂದ ಸ್ವಲ್ಪದರಲ್ಲಿ ಹಿಂದಿರುವಂತೆ ಕಂಡಿತು. ಆದರೂ ಮೈದಾನದ ಅಂಪೈರ್ ಆಗ ತೃತೀಯ ಅಂಪೈರ್ ಮೊರೆ ಹೋದರು.
ತೃತೀಯ ಅಂಪೈರ್ ನಿತಿನ್ ಮೆನನ್ ಮರುಪ್ರಸಾರವನ್ನು ಮೊದಲ ಬಾರಿಗೆ ವೀಸಿದಾಗ ಅದು ರನೌಟ್ನಂತೆಯೇ ಕಂಡಿತು. ಇದರಿಂದ ಸ್ಮಿತ್ ಕೂಡ ಬೇಸರದಿಂದ ಡ್ರೆಸ್ಸಿಂಗ್ ರೂಂಗೆ ಮರಳಲು ಸಜ್ಜಾದರು. ಆದರೆ, ಮತ್ತೊಮ್ಮೆ ಮರುಪ್ರಸಾರವನ್ನು ಸರಿಯಾಗಿ ಗಮನಿಸಿದಾಗ ವಿಕೆಟ್ ಕೀಪರ್ ಬೇರ್ಸ್ಟೋ ಚೆಂಡನ್ನು ಪಡೆದುಕೊಳ್ಳುವ ಮುನ್ನವೇ ಒಂದು ಬೇಲ್ಸ್ ಉರುಳಿದ್ದು ಗಮನಕ್ಕೆ ಬಂದಿತು. ಆಗಿನ್ನೂ ಸ್ಮಿತ್ ಕ್ರೀಸ್ನೊಳಗೆ ಬಂದಿರಲಿಲ್ಲ. ನಂತರ ಬೇರ್ಸ್ಟೋ ಚೆಂಡನ್ನು ಹಿಡಿದು ಇನ್ನೊಂದು ಬೇಲ್ಸ್ ಬೀಳಿಸುವಷ್ಟರಲ್ಲಿ ಸ್ಮಿತ್ ಕ್ರೀಸ್ನೊಳಗೆ ಆಗಮಿಸಿದ್ದರು. ಇದರಿಂದಾಗಿ ನಿತಿನ್ ಮೆನನ್ ನಾಟೌಟ್ ಎಂದು ದೈತ್ಯ ಪರದೆಯ ಮೇಲೆ ತೀರ್ಪಿತ್ತರು. ಬಳಿಕ ಸ್ಮಿತ್ ಬ್ಯಾಟಿಂಗ್ ಮುಂದುವರಿಸಿದರು. ಇದರಿಂದಾಗಿ ಆಸ್ಟ್ರೆಲಿಯಾ ತಂಡಕ್ಕೆ ಆತಿಥೇಯ ಇಂಗ್ಲೆಂಡ್ ವಿರುದ್ಧ ಮೊದಲ ಇನಿಂಗ್ಸ್ನಲ್ಲಿ ಅಮೂಲ್ಯ ಮುನ್ನಡೆ ಸಾಧಿಸಲು ನೆರವಾಯಿತು.
ನಿತಿನ್ ಮೆನನ್ ತೀರ್ಪಿಗೆ ಟೀಮ್ ಇಂಡಿಯಾದ ಹಿರಿಯ ಸ್ಪಿನ್ನರ್ ಆರ್. ಅಶ್ವಿನ್, "ಸರಿಯಾದ ತೀರ್ಪು ನೀಡಿದ ನಿತಿನ್ ಮೆನನ್ ಅವರನ್ನು ಅಭಿನಂದಿಸಲೇಬೇಕು' ಎಂದು ಟ್ವೀಟಿಸಿದ್ದಾರೆ.