ನವದೆಹಲಿ: ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ತನ್ನ ಕಳಪೆ ಪ್ರದರ್ಶನದ ಕಾರಣದಿಂದಾಗಿ ಪಾಕಿಸ್ತಾನ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್ಮನ್ ಬಾಬರ್ ಅಜಾಮ್, ತನ್ನ ದೇಶದ ಕ್ರೀಡಾಭಿಮಾನಿಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬಾಬರ್ ವಿರುದ್ಧ ಆಕ್ರೋಶಗಳ ಸುರಿಮಳೆಯಾಗುತ್ತಿದೆ.
ಇತ್ತೀಚೆಗೆ ಬಾಂಗ್ಲಾದೇಶದ ವಿರುದ್ಧ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನಾಲ್ಕು ಇನ್ನಿಂಗ್ಸ್ ಆಡಿದ ಬಾಬರ್, ಕೇವಲ 64 ರನ್ ಕಲೆಹಾಕಿದರು. ಕಳೆದ ವರ್ಷವೂ ತಮ್ಮ ಬ್ಯಾಟಿಂಗ್ ವೈಫಲ್ಯದಿಂದಾಗಿ ಪಾಕ್ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಬಾಬರ್ ವಿಫಲರಾದರು. ಹೀಗಾಗಿ ಬಾಬರ್ ವಿರುದ್ಧ ಜಾಲತಾಣದಲ್ಲಿ ಪಾಕ್ ಕ್ರೀಡಾಭಿಮಾನಿಗಳು ಟೀಕೆಗಳ ಸಮರವನ್ನೇ ಸಾರಿದ್ದಾರೆ.
ನಕಲಿ ಸುದ್ದಿ ಹಾಗೂ ಮಾನಹಾನಿ ಮೀಮ್ಸ್ ಮೂಲಕ ಬಾಬರ್ ಅನ್ನು ಟಾರ್ಗೆಟ್ ಮಾಡಲಾಗಿದೆ. ಇದೀಗ ಬಾಬರ್ ನಿವೃತ್ತಿ ಕುರಿತಾದ ನಕಲಿ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬಾಬರ್ ಅಜಾಮ್ ಹೆಸರಿನಲ್ಲಿ ನಕಲಿ ಖಾತೆಯನ್ನು ಸೃಷ್ಟಿಸಿ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ ಎಂಬ ನಕಲಿ ಪೋಸ್ಟ್ ಹರಿಬಿಡಲಾಗಿದೆ. ರಾವಲ್ಪಿಂಡಿಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಬಾಬರ್ ಅಜಮ್ ಅವರು ಮೊದಲ ಇನ್ನಿಂಗ್ಸ್ನಲ್ಲಿ 31 ಮತ್ತು ಎರಡನೇ ಇನ್ನಿಂಗ್ಸ್ನಲ್ಲಿ 11 ರನ್ ಗಳಿಸಿದರು. ಇದನ್ನು ಉಲ್ಲೇಖಿಸಿ ಎಕ್ಸ್ ವೇದಿಕೆಯಲ್ಲಿ ನಕಲಿ ನಿವೃತ್ತಿ ಪೋಸ್ಟ್ ವೈರಲ್ ಆಗುತ್ತಿದೆ. ಇದನ್ನು ಅನೇಕರು ನಿಜವೆಂದು ನಂಬಿದ್ದರು. ಆದರೆ, ಅನೇಕ ಮಾಧ್ಯಮಗಳು ವರದಿ ಮಾಡಿದ ಬಳಿಕ ಸುಳ್ಳೆಂದು ಗೊತ್ತಾಗಿದೆ.
ಇನ್ನು 2023ರಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಹೀನಾಯವಾಗಿ ಸೋತು ಟೂರ್ನಿಯಿಂದ ಹೊರಬಿದ್ದ ಬಳಿಕ ಬಾಬರ್ ತಮ್ಮ ನಾಯಕತ್ವವನ್ನು ತ್ಯಜಿಸಿದರು. ಆದರೆ, 2024ರಲ್ಲಿ ಅಮೆರಿಕ ಮತ್ತು ವೆಸ್ಟ್ಇಂಡೀಸ್ ಜಂಟಿಯಾಗಿ ಆಯೋಜನೆ ಮಾಡಿದ ಟಿ20 ವಿಶ್ವಕಪ್‌ಗೆ ಬಾಬರ್ಗೆ ಮತ್ತೆ ನಾಯಕತ್ವ ನೀಡಲಾಯಿತು. ಆದರೆ, ಟಿ20 ವಿಶ್ವಕಪ್ನಲ್ಲೂ ಕಳಪೆ ಪ್ರದರ್ಶನ ಮುಂದುವರಿಯಿತು.
ಇನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಬಾಬರ್ ಅವರ ಇತ್ತೀಚಿನ ಪ್ರದರ್ಶನವು ತೀರಾ ಕಳಪೆಯಾಗಿದೆ. ಕೊನೆಯ 10 ಇನ್ನಿಂಗ್ಸ್‌ಗಳಲ್ಲಿ 19ರ ಸರಾಸರಿಯಲ್ಲಿ ಕೇವಲ 190 ರನ್ ಗಳಿಸಿದ್ದಾರೆ. ಹಾಗೆಯೇ ಏಕದಿನ ಸ್ವರೂಪದಲ್ಲಿ ಅವರ ಸರಾಸರಿ ರನ್ ಗಳಿಕೆ 34ಕ್ಕೆ ಇಳಿದಿದೆ. ಇನ್ನು ಟಿ20 ಮಾದರಿಯಲ್ಲಿ ಸರಾಸರಿ 38ಕ್ಕೆ ಕುಸಿದಿದೆ. ಹೀಗಾಗಿ ಬಾಬರ್ ವಿರುದ್ಧ ಪಾಕ್ನಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ನಿವೃತ್ತಿ ಘೋಷಿಸುವುದೇ ಒಳಿತು. ಇಲ್ಲವಾದಲ್ಲಿ ನಿವೃತ್ತಿಯನ್ನು ನೀಡಿ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. (ಏಜೆನ್ಸೀಸ್)