ಲಂಡನ್: 2004ರಲ್ಲಿ ಇಂಗ್ಲೆಂಡ್ ತಂಡಕ್ಕೆ ಯುವ ಬೌಲರ್ ಆಗಿ ಸೇರ್ಪಡೆಗೊಂಡ ಜೇಮ್ಸ್ ಆ್ಯಂಡರ್ಸನ್, ತಮ್ಮ ಆಕರ್ಷಕ ಬೌಲಿಂಗ್ ಸ್ಕಿಲ್ಸ್ ಮೂಲಕ ಎದುರಾಳಿಗಳ ವಿಕೆಟ್ ಕಿತ್ತು, ಟೀಮ್ನ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದ ಸ್ಟಾರ್ ವೇಗಿ. ಆಂಗ್ಲರ ಕ್ರಿಕೆಟ್ಗೆ ಅಪಾರ ಕೊಡುಗೆ ನೀಡಿದ್ದ ಜೇಮ್ಸ್, ಶುಕ್ರವಾರ (ಜು.12) ತಮ್ಮ 20 ವರ್ಷಗಳ ಸುದೀರ್ಘ ಅಂತಾರಾಷ್ಟೀಯ ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಹೇಳಿದರು.
ವಿಶ್ವ ಕಂಡ ಅತ್ಯುತ್ತಮ ಸೀಮ್ ಬೌಲರ್‌ಗಳಲ್ಲಿ ಒಬ್ಬರಾದ ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್ಸನ್ ತಮ್ಮ ವೃತ್ತಿಜೀವನಕ್ಕೆ ಭಾವಪೂರ್ಣ ವಿದಾಯ ಘೋಷಿಸುತ್ತಿದ್ದಂತೆ ಇತರೆ ದೇಶದ ಸ್ಟಾರ್ ಆಟಗಾರರು ಮತ್ತು ಮಾಜಿ ಕ್ರಿಕೆಟಿಗರು ಧನ್ಯವಾದ ತಿಳಿಸಿದರು. ಪಾಕಿಸ್ತಾನ ಪುರುಷರ ತಂಡದ ನಾಯಕ ಬಾಬರ್ ಆಜಂ, ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಪಡೆದ ಜೇಮ್ಸ್ ಅವರಿಗೆ ಅಭಿನಂದನೆ ಸಲ್ಲಿಸಲು ಮಾಡಿದ ಟ್ವೀಟ್ ಅನ್ನು ಕ್ಷಣಮಾತ್ರದಲ್ಲಿ ಡಿಲೀಟ್ ಮಾಡಿ, ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದು ಸದ್ಯ ನೆಟ್ಟಿಗರ ಲೇವಡಿಗೆ ಕಾರಣವಾಗಿದೆ.
ಆ್ಯಂಡರ್ಸನ್ ನಿವೃತ್ತಿ ಘೋಷಣೆ ವೇಳೆ ತೆಗೆಯಲಾದ ಫೋಟೋವನ್ನು ಬಳಸಿ, ಅದಕ್ಕೆ "ನಿಮ್ಮ ಕಟರ್‌ಗಳನ್ನು ಎದುರಿಸುವುದೇ ಒಂದು ವಿಶೇಷವಾಗಿತ್ತು ಜಿಮ್ಮಿ. ಇಂತಹ ಕ್ರೀಡೆಯಲ್ಲಿ ನಿಮ್ಮ ಉಪಸ್ಥಿತಿ ಇನ್ನುಂದೆ ಇರುವುದಿಲ್ಲ ಎಂಬುದೇ ಬೇಸರ. ಕ್ರಿಕೆಟ್ಗೆ ನೀವು ಕೊಟ್ಟ ಕೊಡುಗೆ ಅವಿಸ್ಮರಣಿಯ. ನಿಮ್ಮ ಬಗ್ಗೆ ಅಪಾರ ಗೌರವವಿದೆ GOAT" ಎಂದು ಬರೆದು ಪೋಸ್ಟ್ ಮಾಡಿದ್ದರು. ಇದನ್ನು ಹಂಚಿಕೊಳ್ಳುತ್ತಿದ್ದಂತೆ ಡಿಲೀಟ್ ಮಾಡಿದ ಬಾಬರ್, ಇದನ್ನೇ ಮೊತ್ತೊಂದು ಬಾರಿ ಹೊಸದಾಗಿ ಪೋಸ್ಟ್ ಮಾಡಿದ್ದಾರೆ. ಆದ್ರೆ, ಒಂದೇ ಒಂದು ಪದವನ್ನು ಬದಲಾಯಿಸಿ ಹಂಚಿಕೊಂಡಿದ್ದಾರೆ.
ಅಸಲಿಗೆ ನಿಮ್ಮ ಕಟರ್‌ಗಳನ್ನು ಎಂದು ಮೊದಲ ಪೋಸ್ಟ್ನಲ್ಲಿ ತಪ್ಪಾಗಿ ಬರೆದಿದ್ದ ಬಾಬರ್, ಎರಡನೇ ಪೋಸ್ಟ್ನಲ್ಲಿ ಸ್ವಿಂಗ್ ಎಂಬ ಪದವನ್ನು ಬಳಸುವ ಮೂಲಕ ಸರಿಪಡಿಸಿ ಹಂಚಿಕೊಂಡರು. ಇದನ್ನು ಸ್ಕ್ರೀನ್ಶಾಟ್ ತೆಗೆದುಕೊಂಡ ನೆಟ್ಟಿಗರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದೇ ತಡ ಬಾಬರ್ ಆಜಂ ಪೋಸ್ ವ್ಯಾಪಕವಾಗಿ ಹರಿದಾಡಿದೆ. ಪಾಕ್ ಕ್ಯಾಪ್ಟನ್ರನ್ನು ಬೆಂಬಿಡದ ನೆಟ್ಟಿಗರು ಇಲ್ಲಿಯೂ ಟೀಕೆ, ವ್ಯಂಗ್ಯವಾಡಿದ್ದಾರೆ,(ಏಜೆನ್ಸೀಸ್).