ಕ್ರೀಡೆ

ಕಳಪೆ ಪ್ರದರ್ಶನವನ್ನ ಟೀಕಿಸಿದ್ದೆ ತಪ್ಪಾಯ್ತಾ; ಮಾಜಿ ಕ್ರಿಕೆಟಿಗರ ವಿರುದ್ಧ ಕಾನೂನು ಸಮರಕ್ಕೆ ಮುಂದಾದ ಪಾಕ್​ ನಾಯಕ

ನವದೆಹಲಿ: ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಿರುವ ಪಾಕಿಸ್ತಾನ ಕ್ರಿಕೆಟ್​ ತಂಡವು ಇತ್ತೀಚಿನ ದಿನಗಳಲ್ಲಿ ವಿವಾದದ ಕೇಂದ್ರ ಬಿಂದುವಾಗಿದೆ. ತನ್ನ ಕಳಪೆ ಪ್ರದರ್ಶನಿಂದಿಂದಾಗಿಯೇ ಟಿ20 ವಿಶ್ವಕಪ್​ನಲ್ಲಿ ಸೂಪರ್​-08 ಹಂತಕ್ಕೆ ಏರುವಲ್ಲಿ ವಿಫಲವಾದ ಪಾಕಿಸ್ತಾನ ತಂಡವನ್ನು ಮಾಜಿ ಹಾಗೂ ಹಾಲಿ ಆಟಗಾರರು ಹೀನಾಮಾನವಾಗಿ ಟೀಕಿಸಿದ್ದರು. ಇದಲ್ಲದೆ ತಂಡದ ಆಟಗಾರರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಆಗ್ರಹ ಕೇಳಿ ಬರುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಪಾಕ್​ ಕ್ರಿಕೆಟ್​ ತಂಡದ ನಾಯಕ ಬಾಬರ್​ ಅಜಂ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ.

ಟಿ20 ವಿಶ್ವಕಪ್​ ಬಳಿಕ ಆಟಗಾರರಾದ ನಸೀಮ್ ಶಾ, ಉಸ್ಮಾನ್ ಖಾನ್ ಮತ್ತು ಮ್ಯಾನೇಜರ್​ ವಹಾಬ್ ರಿಯಾಜ್ ಸೇರಿದಂತೆ ಕೆಲವರು ತವರಿಗೆ ವಾಪಸ್​ ಆಗಿದ್ದಾರೆ. ಉಳಿದಂತೆ ಬಾಬರ್​ ಅಜಂ ಸೇರಿದಂತೆ ತಂಡದ ಇತರ ಸದಸ್ಯರು ಅಮೆರಿಕದಲ್ಲೇ ಉಳಿದಿದ್ದು, ಮುಂದಿನ ವಾರದಲ್ಲಿ ತವರಿಗೆ ಮರಳಬಹುದು ಎಂದು ಹೇಳಲಾಗಿದೆ. ಇತ್ತ ಬಾಬರ್​ ಅಜಂರನ್ನು ನಿರಂತರವಾಗಿ ಟೀಕಿಸುತ್ತ ಬಂದಿರುವ ಅಹಮ್​​ ಶೆಹ್ಜಾದ್​ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿದು ಬಂದಿದೆ.

ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಪಾಕ್​ ಕ್ರಿಕೆಟ್​ ತಂಡದ ನಾಯಕ ಬಾಬರ್​ ಅಜಂ ತಮ್ಮ ವಿರುದ್ಧ ನಿರಂತರವಾಗಿ ಟೀಕಿಸುತ್ತಿರುವ ಅಹ್ಮದ್​ ಶೆಹ್ಜಾದ್​ ಸೇರಿದಂತೆ ಕೆಲವು ಹಿರಿಯರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಆವರು ಪಿಸಿಬಿ ಕಾನೂನು ಘಟಕದ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದದು, ತವರಿಗೆ ಮರಳಿದ ಬಳಿಕ ಅಧಿಕೃತವಾಗಿ ಕಾನೂನು ಪ್ರಕ್ರಿಯೆ ಆರಂಭಿಸಲಿದ್ದಾರೆ ಎಂದು ವರದಿಯಾಗಿದೆ.

ಇತ್ತ ಬಾಬರ್​ ಅಜಂ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿರುವ ಸುದ್ದಿ ಹೊರಬೀಳುತ್ತಿದ್ದಂತೆ ಹಲವರು ಕಿಡಿಕಾರಿದ್ದು, ನಮ್ಮ ಅಭಿಪ್ರಾಯ ತಿಳಿಸಿದ್ಧೇವೆ ಅಷ್ಟೇ ಅದನ್ನು ಬೇರೆ ರೀತಿ ಸ್ವೀಕರಿಸಿ ನಮ್ಮ ವಿರುದ್ಧ ಕ್ರಮಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ಹೇಳಿದ್ದಾರೆ. ಹಲವು ಮಾಜಿ ಕ್ರಿಕೆಟಿಗರು ಈ ಬಗ್ಗೆ ಪಿಸಿಬಿಗೆ ದೂರು ನೀಡಿದ್ದು, ಸರ್ಕಾರದ ಗಮನ ಸೆಳೆಯುವುದಕ್ಕೆ ಮುಂದಾಗಿದ್ದಾರೆ.