ಕ್ರೀಡೆ

ಇಂದಿನಿಂದ ಪಾಕಿಸ್ತಾನ-ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ

ಕರಾಚಿ: ದಕ್ಷಿಣ ಆಫ್ರಿಕಾ ತಂಡ 14 ವರ್ಷಗಳ ಬಳಿಕ ಪಾಕ್ ನೆಲದಲ್ಲಿ ಟೆಸ್ಟ್ ಪಂದ್ಯ ಆಡಲು ಸಜ್ಜಾಗಿದೆ. ಆತಿಥೇಯ ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿ ಮಂಗಳವಾರ ಶುರುವಾಗಲಿದೆ.

2007ರಲ್ಲಿ ದಕ್ಷಿಣ ಆಫ್ರಿಕಾ ತಂಡ ಕೊನೆಯ ಬಾರಿಗೆ ಪಾಕ್‌ನಲ್ಲಿ ಟೆಸ್ಟ್ ಆಡಿದಾಗ ಬಾಲ್ ಬಾಯ್ ಆಗಿದ್ದ ಬಾಬರ್ ಅಜಮ್ ಇದೀಗ ಟೆಸ್ಟ್ ತಂಡದ ನಾಯಕರಾಗಿ ಮೊದಲ ಸವಾಲು ಎದುರಿಸಲಿದ್ದಾರೆ. ಇತ್ತೀಚೆಗೆ ನ್ಯೂಜಿಲೆಂಡ್ ಪ್ರವಾಸದಲ್ಲಿ 0-2ರಿಂದ ಟೆಸ್ಟ್ ಸರಣಿ ಸೋತಿದ್ದ ಪಾಕ್ ತವರಿನಲ್ಲಿ ಪುಟಿದೇಳುವ ಹಂಬಲದಲ್ಲಿದೆ.

ಅತ್ತ ಕ್ವಿಂಟನ್ ಡಿಕಾಕ್ ಸಾರಥ್ಯದ ದಕ್ಷಿಣ ಆಫ್ರಿಕಾ ತಂಡ ತವರಿನಲ್ಲಿ ಶ್ರೀಲಂಕಾ ವಿರುದ್ಧ 2-0ಯಿಂದ ಗೆದ್ದ ವಿಶ್ವಾಸದೊಂದಿಗೆ ಕಣಕ್ಕಿಳಿಯಲಿದೆ. ದಕ್ಷಿಣ ಆಫ್ರಿಕಾ ತಂಡ ಕಳೆದ ಕೆಲ ವರ್ಷಗಳಿಂದ ಪಾಕ್ ವಿರುದ್ಧ ಟೆಸ್ಟ್ ಸರಣಿಗಳನ್ನು ಬದಲಿ ತವರು ತಾಣ ಯುಎಇಯಲ್ಲಿ ಆಡಿತ್ತು. ಹೀಗಾಗಿ ಈಗಿನ ದಕ್ಷಿಣ ಆಫ್ರಿಕಾ ತಂಡದ ಎಲ್ಲ ಆಟಗಾರರಿಗೂ ಪಾಕ್ ನೆಲದ ಅನುಭವ ಹೊಸದಾಗಿದೆ. ಆದರೆ ಪಾಕ್ ವಿರುದ್ಧ ಒಟ್ಟಾರೆ ಟೆಸ್ಟ್ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾ ಬಲಿಷ್ಠ ದಾಖಲೆ ಹೊಂದಿದೆ. ದಕ್ಷಿಣ ಆಫ್ರಿಕಾ ವಿರುದ್ಧದ 26 ಟೆಸ್ಟ್‌ಗಳಲ್ಲಿ ಪಾಕ್ 4ರಲ್ಲಷ್ಟೇ ಗೆದ್ದಿದ್ದು, 15ರಲ್ಲಿ ಸೋಲು ಕಂಡಿದೆ.

ಈ ಸರಣಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಭಾಗವಾಗಿದ್ದು, ಪಾಕಿಸ್ತಾನ ತಂಡ ಈಗಾಗಲೆ ಫೈನಲ್‌ಗೇರುವ ರೇಸ್‌ನಿಂದ ಹೊರಬಿದ್ದಿದೆ. ದಕ್ಷಿಣ ಆಫ್ರಿಕಾ ತಂಡಕ್ಕೆ ಲೆಕ್ಕಾಚಾರದ ಪ್ರಕಾರ ಕ್ಷೀಣ ಅವಕಾಶವಷ್ಟೇ ಬಾಕಿ ಉಳಿದಿದೆ.

ಪಂದ್ಯ ಆರಂಭ: ಬೆಳಗ್ಗೆ 10.30, ನೇರಪ್ರಸಾರ: ಸೋನಿ ಟೆನ್ 2.