ಕ್ರೀಡೆ

ಹೈದರಾಬಾದ್​ ಸ್ಟೇಡಿಯಂನಿಂದ ಅಜರುದ್ದೀನ್​ ಹೆಸರು ತೆರವು, ಹೈಕೋರ್ಟ್ ಮೆಟ್ಟಿಲೇರಲು ನಿರ್ಧಾರ

ನವದೆಹಲಿ: ಹೈದರಾಬಾದ್​ನ ಆರ್​ಜಿಐ ಸ್ಟೇಡಿಯಂನ ನಾರ್ತ್​ ಸ್ಟ್ಯಾಂಡ್​ಗೆ ಇಡಲಾಗಿದ್ದ ಟೀಮ್​ ಇಂಡಿಯಾ ಮಾಜಿ ನಾಯಕ ಮೊಹಮದ್​ ಅಜರುದ್ದೀನ್​ ಅವರ ಹೆಸರನ್ನು ಹೈದರಾಬಾದ್​ ಕ್ರಿಕೆಟ್​ ಸಂಸ್ಥೆಯ (ಎಚ್​ಸಿಎ) ಒಂಬುಡ್ಸ್​ಮನ್​ ಸೂಚನೆಯ ಮೇರೆಗೆ ತೆರವುಗೊಳಿಸಲಾಗಿದೆ. ಇದನ್ನು ವಿರೋಧಿಸಿರುವ ಅಜರುದ್ದೀನ್​ ತೆಲಂಗಾಣ ಹೈಕೋರ್ಟ್​ ಮೆಟ್ಟಿಲೇರುವುದಾಗಿ ಹೇಳಿದ್ದಾರೆ. ಎಚ್​ಸಿಎ ಎಥಿಕ್ಸ್​ ಅಧಿಕಾರಿಯೂ ಆಗಿರುವ ನ್ಯಾಯಮೂರ್ತಿ ವಿ. ಈಶ್ವರಯ್ಯ, ಎಚ್​ಸಿಎಯ ಸದಸ್ಯ ಸಂಸ್ಥೆಗಳಲ್ಲಿ ಒಂದಾದ ಸ್ಥಳಿಯ ಲಾರ್ಡ್ಸ್​ ಕ್ರಿಕೆಟ್​ ಕ್ಲಬ್​ ನೀಡಿದ ದೂರನ್ನು ಪರಿಶೀಲಿಸಿ ಹೆಸರು ತೆರವುಗೊಳಿಸಲು ಸೂಚಿಸಿದ್ದಾರೆ.

ಈ ಸ್ಟ್ಯಾಂಡ್​ಗೆ ಮೊದಲಿಗೆ ವಿವಿಎಸ್​ ಲಕ್ಷ್ಮಣ್​ ಹೆಸರು ಇತ್ತು. ಆದರೆ ಅಜರುದ್ದೀನ್​ ಎಚ್​ಸಿಎ ಅಧ್ಯಕ್ಷರಾಗಿದ್ದ ಸಮಯದಲ್ಲಿ ತನ್ನ ಅಧಿಕಾರವನ್ನು ದುರುಪಯೋಗ ಮಾಡಿ ತನ್ನ ಹೆಸರು ಇಟ್ಟಿದ್ದರು ಎಂದೂ ದೂರಿನಲ್ಲಿ ಆರೋಪಿಸಲಾಗಿತ್ತು. ಆದರೆ, ಭಾರತ ಪರ 99 ಟೆಸ್ಟ್​ ಮತ್ತು 334 ಏಕದಿನ ಪಂದ್ಯ ಆಡಿರುವ ಅಜರುದ್ದೀನ್​, ಎಚ್​ಸಿಎಯ ಅಪೆಕ್ಸ್​ ಕೌನ್ಸಿಲ್​ ಸಭೆಯಲ್ಲಿ ಸರ್ವಾನುಮತದ ರ್ನಿಣಯದ ಬಳಿಕ ತನ್ನ ಹೆಸರು ಇಡಲಾಗಿತ್ತು ಎಂದಿದ್ದಾರೆ. ಅಜರ್​ ಎಚ್​ಸಿಎ ಅಧ್ಯಕ್ಷರಾಗಿ ಕೆಲವೇ ತಿಂಗಳು ಕಳೆದ ಬಳಿಕ 2019ರ ಡಿಸೆಂಬರ್​ನಲ್ಲಿ ಈ ಸಭೆ ನಡೆದಿತ್ತು.

ಎಚ್​ಸಿಎ ಸಂವಿಧಾನದ ಅನ್ವಯ ಈಗ ಹೆಸರು ತೆಗೆಯಬೇಕಾದರೂ ಎಚ್​ಸಿಎ ಅಪೆಕ್ಸ್​ ಕೌನ್ಸಿಲ್​ನ ಒಪ್ಪಿಗೆ ಅಗತ್ಯ ಎಂಬುದು ಅಜರ್​ ವಾದವಾಗಿದೆ. ಹೀಗಾಗಿ ಭಾರತ ತಂಡಕ್ಕೆ ಸುಮಾರು 10 ನಾಯಕನಾಗಿದ್ದ ಆಟಗಾರನ ಹೆಸರು ತೆರವುಗೊಳಿಸುವ ಈ ನಿರ್ಧಾರ ಸರಿ ಇಲ್ಲ. ಅಲ್ಲದೆ ಒಂಬುಡ್ಸ್​ಮನ್​ ಅವಧಿ ಕಳೆದ ಫೆಬ್ರವರಿಯಲ್ಲೇ ಮುಗಿದಿದ್ದು, ಅವಧಿ ವಿಸ್ತರಣೆಯೂ ಆಗಿಲ್ಲ. ಇದರಿಂದ ಅವರ ಆದೇಶಕ್ಕೆ ಯಾವುದೇ ಮಾನ್ಯತೆ ಇಲ್ಲ ಎಂದು 62 ವರ್ಷದ ಅಜರ್​ ಹೇಳಿದ್ದಾರೆ.