ಕ್ರೀಡೆ

ಪ್ಯಾರಾಲಿಂಪಿಕ್ಸ್​​ನಲ್ಲಿ ಚಿನ್ನದ ಪದಕ ಬೇಟೆಯಾಡಿದ ಅವನಿ ಲೇಖರ ಕೋಚ್​ ಕನ್ನಡತಿ!

ಪ್ಯಾರಿಸ್​: ಭಾರತದ ಪ್ಯಾರಾ ಶೂಟರ್​ ಅವನಿ ಲೇಖರ ಪ್ಯಾರಿಸ್​ ಪ್ಯಾರಾಲಿಂಪಿಕ್ಸ್​ನಲ್ಲಿ ಐತಿಹಾಸಿಕ ಸ್ವರ್ಣ ಪದಕದ ಸಾಧನೆ ಮಾಡಿದ್ದಾರೆ. ಕೂಟದ ಕ್ರೀಡಾಸ್ಪರ್ಧೆಯ 2ನೇ ದಿನವಾದ ಶುಕ್ರವಾರ ಮಹಿಳೆಯರ 10 ಮೀ. ಏರ್​ ರೈಫಲ್​ (ಎಸ್​ಎಚ್​1) ವಿಭಾಗದಲ್ಲಿ ಪ್ಯಾರಾಲಿಂಪಿಕ್ಸ್​ ದಾಖಲೆಯೊಂದಿಗೆ ಜೈಪುರದ ಅವನಿ ಲೇಖರ ಸ್ವರ್ಣ ಪದಕ ಗೆದ್ದುಕೊಂಡರು. ಈ ಮೂಲಕ ಪ್ಯಾರಾಲಿಂಪಿಕ್ಸ್​ನಲ್ಲಿ ಅವಳಿ ಸ್ವರ್ಣ ಪದಕ ಗೆದ್ದ ಮೊಟ್ಟಮೊದಲ ಭಾರತೀಯ ಮಹಿಳೆ ಎಂಬ ದಾಖಲೆ ಬರೆದಿದ್ದಾರೆ. ಅವರು 2021ರ ಟೋಕಿಯೊ ಪ್ಯಾರಾಲಿಂಪಿಕ್ಸ್​ನಲ್ಲೂ ಸ್ವರ್ಣ ಪದಕ ಗೆದ್ದುಕೊಂಡಿದ್ದರು. ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಚಿನ್ನ ಗೆಲ್ಲದೆ ನಿರಾಸೆ ಅನುಭವಿಸಿದ್ದ ಭಾರತ, ಪ್ಯಾರಾಲಿಂಪಿಕ್ಸ್​ನಲ್ಲಿ 2ನೇ ದಿನವೇ ಚಿನ್ನ ಗೆದ್ದು "ಜನಮನಗಣ' ಮೊಳಗಿಸುವಲ್ಲಿ ಯಶಸ್ವಿಯಾಗಿದೆ. ಅವನಿ ಮತ್ತು ಕಂಚು ವಿಜೇತ ಮೋನಾ ಅಗರ್ವಾಲ್​ ಮಾಜಿ ಶೂಟರ್​ ಹಾಗೂ ಕನ್ನಡತಿ ಸುಮಾ ಶಿರೂರ್​ ಮಾರ್ಗದರ್ಶನದಲ್ಲಿ ಪ್ಯಾರಾಲಿಂಪಿಕ್ಸ್​ ಪದಕ ಸಾಧನೆ ಮಾಡಿರುವುದು ವಿಶೇಷವಾಗಿದೆ.

ಚಿಕ್ಕಬಳ್ಳಾಪುರ ಮೂಲದ ಸುಮಾ, ಪ್ಯಾರಿಸ್​ ಒಲಿಂಪಿಕ್ಸ್​ ಬಳಿಕ ಪ್ಯಾರಾಲಿಂಪಿಕ್ಸ್​ನಲ್ಲೂ ಭಾರತದ ರೈಫಲ್​ ಶೂಟಿಂಗ್​ ತಂಡದ ಕೋಚ್​ ಆಗಿದ್ದಾರೆ. ಒಲಿಂಪಿಯನ್​ ಸುಮಾ ಏಷ್ಯನ್​ ಮತ್ತು ಕಾಮನ್ವೆಲ್ತ್​ ಗೇಮ್ಸ್​ ಪದಕ ವಿಜೇತೆಯೂ ಆಗಿದ್ದಾರೆ. ಸದ್ಯ ಪತಿ ಸಿದ್ಧಾರ್ಥ್​ ಶಿರೂರ್​ ಜತೆ ಮುಂಬೈನಲ್ಲಿ ನೆಲೆಸಿದ್ದು, ಲಕ್ಷ್ಯ ಶೂಟಿಂಗ್​ ಕ್ಲಬ್​ ಮೂಲಕ ಯುವ ಶೂಟರ್​ಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಟೋಕಿಯೊದಲ್ಲೂ ಅವನಿ ಅವಳಿ ಪದಕ ಗೆಲುವಿಗೆ ಮಾರ್ಗದರ್ಶನ ನೀಡಿದ್ದ 50 ವರ್ಷದ ಸುಮಾ, 2022ರಲ್ಲಿ ದ್ರೋಣಾಚಾರ್ಯ ಪ್ರಶಸ್ತಿಗೂ ಭಾಜನರಾಗಿದ್ದರು.

22 ವರ್ಷದ ಅವನಿ ಶುಕ್ರವಾರ ನಡೆದ ಫೈನಲ್​ ಸ್ಪರ್ಧೆಯಲ್ಲಿ 249.7 ಅಂಕ ಕಲೆಹಾಕಿದರು. ಈ ಮೂಲಕ 3 ವರ್ಷಗಳ ಹಿಂದೆ ಟೋಕಿಯೊದಲ್ಲಿ ತಾನೇ ನಿರ್ಮಿಸಿದ್ದ ಕೂಟದಾಖಲೆಯನ್ನು (249.6) ಮುರಿದರು. ಜಪಾನ್​ನ ಯುನ್ರಿ ಲೀ (246.8) ಬೆಳ್ಳಿ ಜಯಿಸಿದರೆ, ಮೋನಾ ಅಗರ್ವಾಲ್​ 228.7 ಅಂಕಗಳೊಂದಿಗೆ ಕಂಚಿನ ಪದಕ ಒಲಿಸಿಕೊಂಡರು. 11ನೇ ವಯಸ್ಸಿನಲ್ಲೇ ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡು ಸೊಂಟದ ಕೆಳಗೆ ಪಾರ್ಶ್ವವಾಯುವಿಗೆ ತುತ್ತಾಗಿರುವ ಅವನಿ ತನ್ನ ಓಡಾಟಕ್ಕೆ ಗಾಲಿ ಕುರ್ಚಿಯನ್ನೇ ಆಶ್ರಯಿಸಿದ್ದಾರೆ. ಎಸ್​ಎಸ್​1 ವರ್ಗವು ತಮ್ಮ ತೋಳು, ಕಾಲುಗಳ ಚಲನೆಯ ಮೇಲೆ ಪರಿಣಾಮ ಬೀರಿದ ಅಥವಾ ಕೈಕಾಲುಗಳನ್ನು ಹೊಂದಿರದ ಕ್ರೀಡಾಪಟುಗಳಿಗೆ ಸೀಮಿತವಾಗಿದೆ.

ಹಾಲಿ ಚಾಂಪಿಯನ್​ ಆಗಿ ಕಣಕ್ಕಿಳಿದ ಅವನಿ ಅರ್ಹತಾ ಸುತ್ತಿನಲ್ಲಿ 625.8 ಅಂಕ ಗಳಿಸಿ 2ನೇ ಸ್ಥಾನದಲ್ಲಿದ್ದರು. ಅರ್ಹತಾ ಸುತ್ತಿನಲ್ಲಿ 627.5 ಅಂಕಗಳೊಂದಿಗೆ ಪ್ಯಾರಾಲಿಂಪಿಕ್ಸ್​ ದಾಖಲೆ ಬರೆದು ಅಗ್ರಸ್ಥಾನ ಗಳಿಸಿದ ಯೂಕ್ರೇನ್​ನ ಇರಿನಾ ಸ್ಚೆಟ್ನಿಕ್​ ಫೈನಲ್​ನಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟರು. 2 ಬಾರಿಯ ವಿಶ್ವಕಪ್​ ಸ್ವರ್ಣ ವಿಜೇತೆ ಮೋನಾಗೆ ಇದು ಚೊಚ್ಚಲ ಪ್ಯಾರಾಲಿಂಪಿಕ್ಸ್​ ಆಗಿದ್ದು, 623.1 ಅಂಕಗಳೊಂದಿಗೆ ಅರ್ಹತಾ ಸುತ್ತಿನಲ್ಲಿ 5ನೇ ಸ್ಥಾನ ಗಳಿಸಿದ್ದರು.

ಅವನಿಗೆ ತ್ರಿವಳಿ ಪದಕ ಸಾಧನೆ ಅವಕಾಶ!

ಟೋಕಿಯೊದಲ್ಲಿ ಅವಳಿ ಪದಕ (1 ಚಿನ್ನ, 1 ಕಂಚು) ಸಾಧನೆ ಮಾಡಿದ್ದ ಅವನಿ ಲೇಖರ ಈಗ ಪ್ಯಾರಾಲಿಂಪಿಕ್ಸ್​ ಪದಕಗಳ ಸಂಖ್ಯೆಯನ್ನು 3ಕ್ಕೇರಿಸಿಕೊಂಡಿದ್ದಾರೆ. ಅವರಿಗೆ ಹಾಲಿ ಕೂಟದಲ್ಲಿ ಇನ್ನೂ 2 ಪದಕ ಜಯಿಸುವ ಅವಕಾಶವಿದೆ. ಅವನಿ ಇನ್ನು ಪ್ಯಾರಿಸ್​ನಲ್ಲಿ ಮಹಿಳೆಯರ 50 ಮೀ. ರೈಫಲ್​ 3 ಪೊಸಿಷನ್ಸ್​ ಮತ್ತು ಮಿಶ್ರ 10 ಮೀ. ಏರ್​ ರೈಫಲ್​ ಪ್ರೊನ್​ ವಿಭಾಗದಲ್ಲೂ ಸ್ಪರ್ಧಿಸಲಿದ್ದಾರೆ.