ಕ್ರೀಡೆ

ವಿಶ್ವಕಪ್‌ಗೆ ಆಸೀಸ್ ಸಂಭಾವ್ಯ ತಂಡ ಪ್ರಕಟ: ಭಾರತ ಮೂಲದ ತನ್ವೀರ್‌ಗೆ ಸ್ಥಾನ, ಪ್ರಮುಖ ಬ್ಯಾಟರ್‌ಗೆ ಕೊಕ್

ಸಿಡ್ನಿ: ಭಾರತದ ಆತಿಥ್ಯದಲ್ಲಿ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಹಾಗೂ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಭಾರತ ವಿರುದ್ಧದ ಏಕದಿನ ಸರಣಿಗೆ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ), ಪ್ಯಾಟ್ ಕಮ್ಮಿನ್ಸ್ ನೇತೃತ್ವದ 18 ಆಟಗಾರರ ಸಂಭಾವ್ಯ ತಂಡವನ್ನು ಸೋಮವಾರ ಪ್ರಕಟಿಸಿದೆ. ಭಾರತ ಮೂಲದ ಲೆಗ್ ಸ್ಪಿನ್ನರ್ ತನ್ವೀರ್ ಸಂಘ ಜತೆ ಆಲ್ರೌಂಡರ್ ಆರೋನ್ ಹಾರ್ಡಿ ಹೊಸಮುಖ ಎನಿಸಿದ್ದಾರೆ. ವಿಶ್ವಕಪ್‌ಗೆ ಅಂತಿಮ 15 ಆಟಗಾರರ ಹೆಸರು ಸೂಚಿಸಲು ಐಸಿಸಿ ಸೆಪ್ಟೆಂಬರ್ 28 ಗಡುವು ನಿಗದಿಪಡಿಸಿದೆ.

ಮಾರ್ಚ್‌ನಲ್ಲಿ ಭಾರತ ವಿರುದ್ಧ ಮೂರು ಪಂದ್ಯಗಳ ಸರಣಿ ಗೆದ್ದ ತಂಡದ ಭಾಗವಾಗಿದ್ದ ಪ್ರಮುಖ ಬ್ಯಾಟರ್ ಮಾರ್ನಸ್ ಲಬುಶೇನ್ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಗಾಯದ ಸಮಸ್ಯೆಗೆ ತುತ್ತಾಗಿರುವ ನಾಯಕ ಕಮ್ಮಿನ್ಸ್ ಮುಂಬರುವ ದಕ್ಷಿಣ ಆಫ್ರಿಕಾ ಹಾಗೂ ಭಾರತ ಏಕದಿನ ಸರಣಿಗೆ ಸಂಪೂರ್ಣ ಫಿಟ್ ಆಗಲಿದ್ದಾರೆ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಜಾರ್ಜ್ ಬೈಲಿ ತಿಳಿಸಿದ್ದಾರೆ. ಇನ್ನೂ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ದ.ಆಫ್ರಿಕಾ ಏಕದಿನ ಸರಣಿಯಿಂದ ಹೊರಗುಳಿಯುವ ಸಾಧ್ಯತೆಗಳಿದ್ದು, ಭಾರತ ಪ್ರವಾಸಕ್ಕೆ ತಂಡ ಸೇರುವ ನಿರೀಕ್ಷೆಯಿದೆ.

ಸಂಭಾವ್ಯ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಸೀನ್ ಅಬೋಟ್, ಆಶ್ಟನ್ ಅಗರ್, ಅಲೆಕ್ಸ್ ಕ್ಯಾರಿ, ನಾಥನ್ ಎಲ್ಲಿಸ್, ಕ್ಯಾಮರಾನ್ ಗ್ರೀನ್, ಹ್ಯಾಸಲ್‌ವುಡ್, ಟ್ರಾವಿಸ್ ಹೆಡ್, ಜೋಸ್ ಇಂಗ್ಲಿಸ್, ಮಿಚೆಲ್ ಮಾರ್ಷ್, ಮ್ಯಾಕ್ಸ್‌ವೆಲ್, ತನ್ವೀರ್ ಸಂಘ, ಆರೋನ್ ಹಾರ್ಡಿ, ಸ್ಟೀವನ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋಯಿನಿಸ್, ಡೇವಿಡ್ ವಾರ್ನರ್, ಆಡಂ ಜಂಪಾ.