ಮೆಲ್ಬೋರ್ನ್: ವಿಶ್ವ ನಂ. 1 ಆಟಗಾರ್ತಿ ಇಗಾ ಸ್ವಿಯಾಟೆಕ್, ಮಾಜಿ ಚಾಂಪಿಯನ್ ವಿಕ್ಟೋರಿಯಾ ಅಜರೆಂಕಾ, ಹಾಲಿ ರನ್ನರ್ಅಪ್ ಎಲೆನಾ ರೈಬಕಿನಾ, 5ನೇ ಶ್ರೇಯಾಂಕಿತೆ ಅಮೆರಿಕದ ಜೆಸ್ಸಿಕಾ ಪೆಗುಲಾ, ಸ್ಲೋವನ್ ಸ್ಟೀನ್ಸ್, 2021ರ ಯುಎಸ್ ಓಪನ್ ಚಾಂಪಿಯನ್ ಬ್ರಿಟನ್ನ ಎಮ್ಮಾ ರಾಡುಕೇನು ವರ್ಷದ ಮೊದಲ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿ ಆಸ್ಟ್ರೇಲಿಯನ್ ಓಪನ್ನ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಶುಭಾರಂಭ ಮಾಡಿದ್ದರೆ, ಪುರುಷರ ವಿಭಾಗದಲ್ಲಿ 2ನೇ ಶ್ರೇಯಾಂಕಿತ ಕಾಲೋರ್ಸ್ ಅಲ್ಕರಾಜ್, 6ನೇ ಶ್ರೇಯಾಂಕಿತ ಅಲೆಕ್ಸಾಂಡರ್ ಜ್ವೆರೇವ್, 8ನೇ ಶ್ರೇಯಾಂಕಿತ ಹೋಲ್ಗರ್ ರುನ್, 11ನೇ ಶ್ರೇಯಾಂಕಿತ ಕ್ಯಾಸ್ಪರ್ ರುಡ್, 13ನೇ ಶ್ರೇಯಾಂಕಿತ ಗ್ರಿಗೋರ್ ಡಿಮಿಟ್ರೋವ್ ಗೆಲುವಿನ ಆರಂಭ ಕಂಡಿದ್ದಾರೆ.
ವೃತ್ತೀಜಿವನದ 5ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಹಂಬಲದಲ್ಲಿರುವ ಪೋಲೆಂಡ್ನ ಇಗಾ ಸ್ವಿಯಾಟೆಕ್ ಮೊದಲ ಸುತ್ತಿನಲ್ಲಿ 2020ರ ಚಾಂಪಿಯನ್ ಸೋಫಿಯಾ ಕೆನಿನ್ ಎದುರು 7-6, 6-2 ನೇರಸೆಟ್ಗಳಿಂದ ಗೆದ್ದರು. 2016ರ ಚಾಂಪಿಯನ್ ಜರ್ಮನಿಯ ಏಂಜೆಲಿಕ್ ಕೆರ್ಬರ್ 2-6, 6-3, 1-6ರಿಂದ ಅಮೆರಿಕದ ಡೇನಿಯಲ್ ಕಾಲಿನ್ಸ್ ಎದುರು ಆಘಾತ ಎದುರಿಸಿದರು.
ಅಲ್ಕರಾಜ್ ಮೊದಲ ಸುತ್ತಿನಲ್ಲಿ 7-6, 6-1, 6-2ರಿಂದ ಫ್ರಾನ್ಸ್ನ ರಿಚರ್ಡ್ ಗಾಸ್ಕೆಟ್ ಎದುರು ಸುಲಭ ಮುನ್ನಡೆ ಕಂಡರು. 20 ವರ್ಷದ ಅಲ್ಕರಾಜ್ ಉತ್ಸಾಹಿ ಆಟದ ಎದುರು 37 ವರ್ಷದ ಗಾಸ್ಕೆಟ್ ಮಂಕಾದರು.