ಮೆಲ್ಬೋರ್ನ್: ಪುರುಷರ ಮತ್ತು ಮಹಿಳಾ ಸಿಂಗಲ್ಸ್ ವಿಭಾಗದ ಹಾಲಿ ಚಾಂಪಿಯನ್ಗಳಾದ ನೊವಾಕ್ ಜೋಕೊವಿಕ್ ಮತ್ತು ಅರಿನಾ ಸಬಲೆಂಕಾ ವರ್ಷದ ಮೊದಲ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿ ಆಸ್ಟ್ರೆಲಿಯನ್ ಓಪನ್ನಲ್ಲಿ ನಾಲ್ಕನೇ ಸುತ್ತು ಪ್ರವೇಶಿಸಿದ್ದಾರೆ. ಜೋಕೋ ಮೆಲ್ಬೋರ್ನ್ ಅಂಗಳದಲ್ಲಿ ಸತತ 31ನೇ ಪಂದ್ಯ ಗೆಲ್ಲುವ ಮೂಲಕ ತನ್ನ 100ನೇ ಪಂದ್ಯವನ್ನು ಸ್ಮರಣೀಯಗೊಳಿಸಿದರು. ಉಳಿದಂತೆ 4ನೇ ಶ್ರೇಯಾಂಕಿತ ಜೆನ್ನಿಕ್ ಸಿನ್ನರ್, 7ನೇ ಶ್ರೇಯಾಂಕಿತ ಸ್ಟೆಾನೋಸ್ ಸಿಸಿಪಾಸ್, 4ನೇ ಶ್ರೇಯಾಂಕಿತೆ ಕೋಕೋ ಗೌಫ್ ಕೂಡ 3ನೇ ಸುತ್ತು ದಾಟುವಲ್ಲಿ ಯಶಸ್ವಿಯಾಗಿದ್ದಾರೆ.
ದಾಖಲೆಯ 11ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಜೋಕೋ ಶುಕ್ರವಾರ ನಡೆದ ಕಾದಾಟದಲ್ಲಿ ಅರ್ಜೆಂಟೀನಾದ ಥಾಮಸ್ ಮಾರ್ಟಿನ್ ವಿರುದ್ಧ 6-3, 6-3, 7-6 ನೇರಸೆಟ್ಗಳಿಂದ ಜಯಿಸಿದರು. ವಿಶ್ವ ನಂ. 1 ಜೋಕೋ ಮೆಲ್ಬೋರ್ನ್ ಪಾರ್ಕ್ನಲ್ಲಿ 16ನೇ ಬಾರಿ 4ನೇ ಸುತ್ತಿಗೇರಿದ ಸಾಧನೆ ಮಾಡಿದ್ದಾರೆ.
ಬೆಲಾರಸ್ ತಾರೆ ಹಾಗೂ 2ನೇ ಶ್ರೇಯಾಂಕಿತೆ ಸಬಲೆಂಕಾ 3ನೇ ಸುತ್ತಿನಲ್ಲಿ ಯೂಕ್ರೇನ್ನ ಲೆಸಿಯಾ ಟ್ಯುರೆಂಕೊ ವಿರುದ್ಧ 6-0, 6-0 ನೇರಸೆಟ್ಗಳಿಂದ 52 ನಿಮಿಷಗಳಲ್ಲೇ ಸುಲಭವಾಗಿ ಗೆದ್ದರು. ಕಳೆದ 3 ಸುತ್ತಿನ ಪಂದ್ಯಗಳಲ್ಲಿ ಸಬಲೆಂಕಾ ಕೇವಲ 6 ಗೇಮ್ ಬಿಟ್ಟುಕೊಟ್ಟಿದ್ದಾರೆ. ಆದರೆ ರಷ್ಯಾ&ಯೂಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಸಬಲೆಂಕಾಗೆ ಎದುರಾಳಿ ಆಟಗಾರ್ತಿ ಹಸ್ತಲಾವ ನೀಡಲಿಲ್ಲ.
ಜೋಕೋ ವಿಶೇಷ ಶತಕ
ನೊವಾಕ್ ಜೋಕೊವಿಕ್ ಎಲ್ಲ 4 ಗ್ರಾಂಡ್ ಸ್ಲಾಂ ಟೂರ್ನಿಗಳಲ್ಲೂ ಕನಿಷ್ಠ 100 ಪಂದ್ಯವಾಡಿದ ವಿಶ್ವದ ಮೊದಲ ಆಟಗಾರ ಎನಿಸಿದ್ದಾರೆ. ಮೆಲ್ಬೋರ್ನ್ನಲ್ಲಿ ಆಡಿರುವ 100 ಪಂದ್ಯಗಳಲ್ಲಿ ಅವರು 92ರಲ್ಲಿ ಗೆದ್ದಿದ್ದಾರೆ. ವಿಂಬಲ್ಡನ್ನಲ್ಲಿ 103 (92 ಜಯ), ಯುಎಸ್ ಓಪನ್ನಲ್ಲಿ 101 (88ಜಯ) ಮತ್ತು ್ರೆಂಚ್ ಓಪನ್ನಲ್ಲಿ 108 ಪಂದ್ಯ (92 ಜಯ) ಆಡಿದ್ದಾರೆ.
3ನೇ ಸುತ್ತಿಗೇರಿದ ಬೋಪಣ್ಣ ಜೋಡಿ
ಎರಡನೇ ಶ್ರೇಯಾಂಕಿತ ಭಾರತದ ರೋಹನ್ ಬೋಪಣ್ಣ ಮತ್ತು ಆತಿಥೇಯ ಆಸ್ಟ್ರೆಲಿಯಾದ ಮ್ಯಾಥ್ಯೂ ಎಬ್ಡೆನ್ ಜೋಡಿ ಪುರುಷರ ಡಬಲ್ಸ್ ವಿಭಾಗದಲ್ಲಿ 3ನೇ ಸುತ್ತಿಗೇರಿದೆ. ಬೋಪಣ್ಣ-ಎಬ್ಡೆನ್ ಜೋಡಿ ಶುಕ್ರವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಜಾನ್ ಮಿಲ್ಮನ್ ಮತ್ತು ಎಡ್ವರ್ಡ್ ವಿಂಟರ್ ಜೋಡಿಯನ್ನು 6-2, 6-4 ನೇರಸೆಟ್ಗಳಿಂದ ಪರಾಭವಗೊಳಿಸಿತು. 43 ವರ್ಷದ ಬೋಪಣ್ಣ ಮತ್ತು ಎಬ್ಡೆನ್ ಅವರ ಅನುಭವಿ ಆಟದ ಎದುರು ಎದುರಾಳಿ ಸಂಪೂರ್ಣ ಮಂಕಾಯಿತು. ಭಾರತದ ಮತ್ತೋರ್ವ ಆಟಗಾರ ಶ್ರೀರಾಮ್ ಬಾಲಾಜಿ ರೊಮೇನಿಯಾದ ವಿಕ್ಟರ್ ಕೋರ್ನೆಯಾ ಜತೆಗೂಡಿ 2ನೇ ಸುತ್ತಿಗೇರಿದ್ದಾರೆ.