ಕ್ರೀಡೆ

2.5 ಕೋಟಿ ರೂ.ಗೆ ಬ್ರಾಡ್ಮನ್ ಕ್ಯಾಪ್ ಮಾರಾಟ; ಹರಾಜಿನ ಹಿಂದಿದೆ ಕ್ರಿಮಿನಲ್ ಸ್ಟೋರಿ!

ಸಿಡ್ನಿ: ಕ್ರಿಕೆಟ್ ದಿಗ್ಗಜ ಡಾನ್ ಬ್ರಾಡ್ಮನ್ ಅವರು ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ವೇಳೆ ಧರಿಸಿದ್ದ ಬ್ಯಾಗಿ ಗ್ರೀನ್ ಕ್ಯಾಪ್ ಬರೋಬ್ಬರಿ 2.50 ಕೋಟಿ ರೂಪಾಯಿಗೆ (4.50 ಲಕ್ಷ ಆಸ್ಟ್ರೇಲಿಯನ್ ಡಾಲರ್) ಮಾರಾಟವಾಗಿದೆ. ಇದು ಕ್ರಿಕೆಟ್‌ನ ಚಿರಸ್ಮರಣೀಯ ವಸ್ತುಗಳ ಹರಾಜಿನಲ್ಲಿ 2ನೇ ಗರಿಷ್ಠ ಮೌಲ್ಯವೆನಿಸಿದೆ. ಹರಾಜು ಪ್ರಕ್ರಿಯೆಯಲ್ಲಿ ಆಸ್ಟ್ರೇಲಿಯಾದ ಉದ್ಯಮಿ ಪೀಟರ್ ಫ್ರೀಡ್‌ಮನ್ ಎಂಬವರು ಈ ಕ್ಯಾಪ್ ಖರೀದಿಸಿದ್ದು, ಆಸ್ಟ್ರೇಲಿಯಾದಲ್ಲೆಡೆ ಈ ಕ್ಯಾಪ್ ಪ್ರದರ್ಶನಕ್ಕಿಡುವ ಯೋಜನೆಯನ್ನೂ ಹಾಕಿಕೊಂಡಿದ್ದಾರೆ.

ಬ್ರಾಡ್ಮನ್ 1928ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ವೇಳೆ ಈ ಕ್ಯಾಪ್ ಧರಿಸಿದ್ದರು. ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಅವರ ಬ್ಯಾಗಿ ಗ್ರೀನ್ ಕ್ಯಾಪ್ ಈ ವರ್ಷ 5.60 ಕೋಟಿ ರೂಪಾಯಿಗೆ (10.07 ಲಕ್ಷ ಆಸ್ಟ್ರೇಲಿಯನ್ ಡಾಲರ್) ಹರಾಜಿಗಿದ್ದು, ಈಗಲೂ ಅತ್ಯಂತ ದುಬಾರಿ ಕ್ರಿಕೆಟ್‌ನ ಚಿರಸ್ಮರಣೀಯ ವಸ್ತು ಎನಿಸಿದೆ. 1928ರಿಂದ 1948ರವರೆಗೆ 20 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದ ಡಾನ್ ಬ್ರಾಡ್ಮನ್ 52 ಟೆಸ್ಟ್ ಪಂದ್ಯವನ್ನು ಆಡಿ ಗಮನಾರ್ಹ 99.94 ಸರಾಸರಿಯೊಂದಿಗೆ ನಿವೃತ್ತಿ ಹೊಂದಿದ್ದರು. 29 ಶತಕಗಳ ಸಹಿತ 6,996 ರನ್ ಬಾರಿಸಿದ್ದ ಅವರು ಕ್ರಿಕೆಟ್ ಇತಿಹಾಸದ ಸರ್ವಶ್ರೇಷ್ಠ ಬ್ಯಾಟ್ಸ್‌ಮನ್ ಎನಿಸಿದ್ದಾರೆ.

ಕ್ರಿಮಿನಲ್ ಪ್ರಕರಣ ಹರಾಜಿಗೆ ಕಾರಣ

ಬ್ರಾಡ್ಮನ್ ಅವರ ಈ ಕ್ಯಾಪ್ ಹರಾಜಿಗೆ ಇಟ್ಟಿರುವ ಹಿಂದೆ ಕ್ರಿಮಿನಲ್ ಪ್ರಕರಣವೊಂದರ ಕಾರಣ ಇರುವುದು ವಿಪರ‌್ಯಾಸವಾಗಿದೆ. 1929ರ ನವೆಂಬರ್‌ನಲ್ಲಿ ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಪದಾರ್ಪಣೆ ಮಾಡುವ ಮುನ್ನ ಪಡೆದಿದ್ದ ಈ ಕ್ಯಾಪ್ ಅನ್ನು ಬ್ರಾಡ್ಮನ್ ಅವರು 1959ರಲ್ಲಿ ಕುಟುಂಬದ ಗೆಳೆಯ ಪೀಟರ್ ಡನ್‌ಹ್ಯಾಂ ಎಂಬವರಿಗೆ ಉಡುಗೊರೆಯಾಗಿ ನೀಡಿದ್ದರು. ಅಡಿಲೇಡ್‌ನಲ್ಲಿ ಬ್ರಾಡ್ಮನ್‌ರ ಪಕ್ಕದ ಮನೆಯವರೂ ಆಗಿದ್ದ ಡನ್‌ಹ್ಯಾಂ ಈ ವರ್ಷ ಮೇನಲ್ಲಿ ವಂಚನೆ ಪ್ರಕರಣವೊಂದರಲ್ಲಿ ಜೈಲು ಸೇರಿದ್ದರು. 5.56 ಕೋಟಿ ರೂ. ಮೊತ್ತದ ವಂಚನೆಯ ಆರೋಪ ಹೊತ್ತಿರುವ ಡನ್‌ಹ್ಯಾಂ ದಿವಾಳಿಯಾಗಿರುವುದರಿಂದ, ಅವರಿಂದ ವಂಚನೆಗೊಳಗಾದವರು ನಷ್ಟವನ್ನು ತುಂಬಿಕೊಡುವುದಕ್ಕಾಗಿ ಬ್ರಾಡ್ಮನ್‌ರ ಕ್ಯಾಪ್ ಹರಾಜು ಹಾಕಿ ಮೊತ್ತವನ್ನು ನೀಡುವಂತೆ ಕೇಳಿಕೊಂಡಿದ್ದರು.